ಕುಶಾಲನಗರ, ಫೆ 12 : ಆಧುನಿಕತೆ ಎಲ್ಲೆಡೆ ವಿಜೃಂಭಿಸುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲಿ ನೋಡಿದರಲ್ಲಿ ಎಲ್ಲೆಲ್ಲೂ ಟಿವಿ, ಕಂಪ್ಯೂಟರ್ ಹಾಗೂ ಮೊಬೈಲ್ ಗಳಿಂದಾಗಿ ಪುಸ್ತಕಗಳನ್ನು ಓದುವ ಹವ್ಯಾಸವೇ ಮಾಯವಾಗುತ್ತಿದೆ ಎಂದು ಸಾಹಿತಿಯೂ ಆದ ಕುಶಾಲನಗರದ ಅನುಗ್ರಹ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಲೀಲಾಕುಮಾರಿ ತೊಡಿಕಾನ ವಿಷಾದಿಸಿದರು.
ಸಾಹಿತ್ಯಾಸಕ್ತರ ವೇದಿಕೆ ವತಿಯಿಂದ ಹಾರಂಗಿ ರಸ್ತೆಯ ಮೂಕಾಂಬಿಕಾ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತಮ ಪುಸ್ತಕಗಳನ್ನು ಓದುವುದರಿಂದ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ನಾಡಿನ ಅಗ್ರಮಾನ್ಯ ಕವಿ, ಸಾಹಿತಿಗಳ, ಶರಣರ ವಿಚಾರಧಾರೆಗಳನ್ನು ಅರಿತು ನಮ್ಮಗಳ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಇದರಿಂದಾಗಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ.
ನಾಡು ಕಂಡ ಹೆಸರಾಂತ ನವ್ಯ ಕವಿ
ಡಾ. ಶಿವರುದ್ರಪ್ಪ ಅವರು ರಚಿಸಿರುವ ಎದೆ ತುಂಬಿ ಹಾಡುವೆನು, ಕಾಣದಾ ಕಡಲಿಗೆ ಹಂಬಲಿಸಿದೇ ಮನಾ ಇತ್ಯಾದಿ ರಚನೆಗಳು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ.
ಇಂದಿನ ವಿದ್ಯಾರ್ಥಿಗಳೂ ಕೂಡ ಕಥೆ, ಕವನಗಳನ್ನು ಬರೆಯುವ ಮೂಲಕ ಸಾಹಿತ್ಯದ ಅಭಿರುಚಿ ಹೊಂದಬೇಕಿದೆ ಎಂದು ತೊಡಿಕಾನ ಕರೆಕೊಟ್ಟರು.
ರಾಷ್ಟ್ರ ಕವಿ ಡಾ.ಜಿ.ಎಸ್.ಶಿವರುದ್ರಪ್ಪ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆಯೂ ಆದ ಮೂಕಾಂಬಿಕಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಮಾತನಾಡಿ, ಜಗದ ಕವಿ – ಯುಗದ ಕವಿ ಕುವೆಂಪು ಮನೆತನದ ಸೊಸೆಯಾದ ನನಗೆ ಜಿಪಂ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಡಾ.ಜಿ.ಎಸ್.ಎಸ್ ಅವರನ್ನು ಖುದ್ದು ಭೇಟಿ ಮಾಡಿ ಗಡಿ ನಾಡು ಕೊಡಗಿನ ವಿಚಾರಗಳನ್ನು ಹಂಚಿಕೊಂಡದ್ದನ್ನು ನೆನಪು ಮಾಡಿಕೊಂಡರಲ್ಲದೇ, ಸಾಹಿತ್ಯ ಕ್ಷೇತ್ರದ ಎಲ್ಲಾ ದಿಗ್ಗಜರನ್ನು ಕಾಲ ಕಾಲಕ್ಕೆ ಸ್ಮರಣೆ ಮಾಡುತ್ತಾ ಇಂದಿನ ವಿದ್ಯಾರ್ಥಿಗಳಿಗೆ ಕವಿ ಸಾಹಿತಿಗಳ ಪರಿಚಯ ಮಾಡುತ್ತಿರುವ ಸಾಹಿತ್ಯಾಸಕ್ತರ ವೇದಿಕೆಯ ಚಟುವಟಿಕೆಗಳನ್ನು ಶ್ಲಾಘಿಸಿದರು.
ಮತ್ತೋರ್ವ ಅತಿಥಿ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕನ್ನಡ ಅಧ್ಯಾಪಕ ಕೆ.ಆರ್.ರಮೇಶ್ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ಮೂರನೇ ರಾಷ್ಟ್ರಕವಿ ಬಿರುದಿಗೆ ಭಾಜನರಾದ ಡಾ. ಜಿಎಸ್ಎಸ್, ಕುವೆಂಪು, ಗೋವಿಂದ ಪೈ ಮೊದಲಾದ ಕವಿ ಸಾಹಿತಿಗಳ ಪುಸ್ತಕಗಳನ್ನು ಹೆಚ್ಚಾಗಿ ಓದುವ ಮೂಲಕ ಸಾಹಿತ್ಯ ಜ್ಞಾನ ಹೆಚ್ಚಿಸಿಕೊಂಡರೆ ಶಿಕ್ಷಣವೂ ರುಚಿಸುತ್ತದೆ ಎಂದರು.
ಮೂಕಾಂಬಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸೂದನ ಗೋಪಾಲ್ ಅವರು ಶಿವರುದ್ರಪ್ಪ ವಿರಚಿತ ಭಾವಗೀತೆಗಳನ್ನು ಹಾಡಿದರು.
ಮೂಕಾಂಬಿಕಾ ಪಿಯು ಕಾಲೇಜು ಪ್ರಾಂಶುಪಾಲ ಪ್ರಸನ್ನ, ಉಪನ್ಯಾಸಕಿ ಶ್ರೇಣಿ, ಹೇಮಂತ್, ಶಿಕ್ಷಕ ಕಾಂತರಾಜು ಇದ್ದರು.
Back to top button
error: Content is protected !!