ಕಾರ್ಯಕ್ರಮ

ಕೂಡಿಗೆಯಲ್ಲಿ ನಡೆದ ಮಾತು-ಮಾಧುರ್ಯ ಕಾರ್ಯಗಾರ

ಕುಶಾಲನಗರ, ಅ.23: ಕುಶಾಲನಗರ ಕನ್ನಡ ಸಿರಿ ಸ್ನೇಹ ಬಳಗ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೂಡಿಗೆ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ಮತ್ತು ಬ್ರಿಟಿಷ್ ರ ವಿರುದ್ಧ ಹೋರಾಡಿ ಭಾರತಕ್ಕೆ ಮೊದಲ ಜಯ ಎಂಬ ಹೆಗ್ಗಳಿಕೆ ತಂದುಕೊಟ್ಟಿದ್ದ ಕಿತ್ತೂರು ರಾಣಿ ಚೆನ್ನಮ್ಮ ದಿನಾಚರಣೆ, ಭಾರತ ಕಂಡ ಮೊದಲ ಸ್ವಾತಂತ್ರ್ಯ ಹೋರಾಟದ 200 ನೇ ಜಯಂತೋತ್ಸವ ದ ಅಂಗವಾಗಿ ಮಾತು- ಮಾಧುರ್ಯ ಎಂಬ ಕಾರ್ಯಗಾರವು ಕೂಡಿಗೆಯ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಉಪ ನಿರ್ದೇಶಕ ಎಂ. ಚಂದ್ರಕಾಂತ್ ನೆರವೇರಿಸಿದರು. ನಂತರ ಮಾತನಾಡಿದ ಅವರು, ಮಾತು ಮಾಧುರ್ಯ ಎಂಬ ಕಾರ್ಯಗಾರವು ಪ್ರಸ್ತುತ ಶಿಕ್ಷಣ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಶಿಕ್ಷಣದ ಅಮೂಲ್ಯವಾದ ಕೌಶಲ್ಯ, ಜಾಗೃತಿ , ಕಲಿಕೆಯ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಪೂರಕವಾದುದ್ದು , ಅಲ್ಲದೇ ವಿಧ್ಯಾಭ್ಯಾಸದ ಜೊತೆಯಲ್ಲಿ ಉದ್ದೇಶದ ಗುರಿಯನ್ನು ಸಾಧಿಸಲು ಸಂಸ್ಕೃತಿ ಸಂಸ್ಕಾರದ ಉನ್ನತ ಆದರ್ಶಗಳನ್ನು ತಿಳಿದುಕೊಳ್ಳುವ ಮೂಲಕ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಮುನ್ನಡೆಯನ್ನು ಸಾಧಿಸಲು ಇಂತಹ ಕಾರ್ಯಗಾರವು ಪೂರಕವಾಗುತ್ತವೆ. ಎಂದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿಗಳನ್ನು ಕನ್ನಡ ಸಿರಿ ಸ್ನೇಹ ಬಳಗ ಅಧ್ಯಕ್ಷ ಬಿ.ಎಸ್ ಲೋಕೇಶ್ ಸಾಗರ್ ಮಾತಾನಾಡುತ್ತಾ ಬ್ರಿಟಿಷ್ ರ ವಿರುದ್ಧ ಹೋರಾಡಿ ಭಾರತಕ್ಕೆ ಮೊದಲ ಜಯ ಎಂಬ ಹೆಗ್ಗಳಿಕೆ ತಂದುಕೊಟ್ಟ , ಮತ್ತು ಭಾರತ ಕಂಡ ಮೊದಲ ಸ್ವಾತಂತ್ರ್ಯ ಹೋರಾಟದ 200ನೇ ಜಯಂತೋತ್ಸವ ವಿಷಯಗಳ ಬಗ್ಗೆ , ಕಿತ್ತೂರು ರಾಣಿ ಚೆನ್ನಮ್ಮ ನವರ ಧೈರ್ಯ ಸಾಹಸ, ಹೋರಾಟದ ಛಲ,ಆಡಳಿತ ವ್ಯವಸ್ಥೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಡಯಟ್ ನ ಹಿರಿಯ ಪ್ರಾಧ್ಯಾಪಕ ಮಂಜುನಾಥ ಮಾತಾನಾಡುತ್ತಾ ಮಾತು- ಮಾಧುರ್ಯ ದ ಮೂಲಕ ಪೂರ್ಣ ಜ್ಞಾನದ ಅರಿವು, ಮಾಹಿತಿಯ ಸಂಗ್ರಹ, ಉಚ್ಚಾರಣೆ, ಪದ ಜೋಡಣೆ , ಪದ ಬಳಕೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಲು ಪ್ರಶಿಕ್ಷಣಾರ್ತಿಗಳಿಗೆ ಅನುಕೂಲವಾಗುವುದು ಎಂದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮೂರು ವಿಭಾಗದಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕುಶಾಲನಗರ ಬಾಲಕಾ ಪ್ರೌಢಶಾಲಾ ವಿದ್ಯಾರ್ಥಿ ಎಂ.ವಿ. ಜೀಶೀಯಾ ನವರನ್ನು ಮತ್ತು ಈ ಸಾಲಿನ 10 ನೇ ತರಗತಿಯ ಪ್ರೌಢಶಾಲಾ ಫಲಿತಾಂಶದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೆ ಹೆಚ್ಚು ಮುತುರ್ಜಿ ವಹಿಸಿದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕರಾದ ಎಂ. ಚಂದ್ರಕಾತ್ ನವರನ್ನು ಕಿತ್ತೂರು ರಾಣಿ ಚೆನ್ನಮ್ಮ ದಿನಾಚರಣೆಯ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಗಾರದಲ್ಲಿ ನಿವೃತ್ತ ಕಲಾ ಶಿಕ್ಷಕ ಉ.ರಾ. ನಾಗೇಶ್ ನವರು ಕಾರ್ಯಕ್ರಮದ ನಿರೂಪಣೆಗೆ ಸಂಬಂಧಿಸಿದಂತೆ, ಶನಿವಾರಸಂತೆ ಪ್ರೌಢಶಾಲೆ ಶಿಕ್ಷಕ ಕೆ.ಪಿ. ಜಯಕುಮಾರ್ ರಸಾನುಭವ ಕುರಿತು, ಮತ್ತು ಭಾಷಣ ಮಾಡುವ ವಿಷಯದ ಕುರಿತಾದ ಬಗ್ಗೆ ಕೂಡಿಗೆ ಕ್ಲಸ್ಟರ್ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿ ಕೆ. ಶಾಂತಕುಮಾರ್ ನವರು ವಿದ್ಯಾರ್ಥಿಗಳು ಮೂರು ವಿಭಾಗಕ್ಕೆ ಸಂಬಂಧಿಸಿದಂತೆ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಕಾರ್ಯಗಾರದಲ್ಲಿ ತಿಳಿಸಿದರು.
ವೇದಿಕೆಯಲ್ಲಿ ಡಯಟ್ ನ ಪ್ರಾಧ್ಯಾಪಕ ಹೇಮಂತ್ ಕುಮಾರ್, ವಿಜಯ್ ಕನ್ನಡ ಸಿರಿ ಸ್ನೇಹ ಬಳಗದ ಪ್ರಮುಖ ಕೆ ಕೆ. ನಾಗರಾಜಶೆಟ್ಟ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ. ಪ್ರಕಾಶ್, ದೈಹಿಕ ಶಿಕ್ಷಣ ಶಿಕ್ಷಕರಾದ ಸದಾಶಿವ ಎಸ್ ಪಲ್ಲೇದ್ ಸೇರಿದಂತೆ ಡಯಟ್ ನ ಉಪನ್ಯಾಸಕ ವೃಂದ, ಹಾಗೂ ಪ್ರಶಿಕ್ಷಣಾರ್ತಿಗಳು ಹಾಜರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಉ.ರಾ. ನಾಗೇಶ್ ನೆರವೇರಿಸಿ, ಉಪನ್ಯಾಸಕ ವಿಜಯ ಸ್ವಾಗತಿಸಿ, ಶಾಂತಕುಮಾರ್ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!