ಕುಶಾಲನಗರ, ಸೆ 09: ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಅನುಗ್ರಹ ಪದವಿ ಮತ್ತು ಪದವಿಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಹಮ್ಮಿಕೊಂಡಿದ್ದ ಏಕೀಕರಣ ಮತ್ತು ಸಾಹಿತ್ಯ ಎಂಬ ಉಪನ್ಯಾಸ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಅನುಗ್ರಹ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್.ಕೆ.ಸತೀಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕನ್ನಡ ಮತ್ತು ಕನ್ನಡಿಗರ ಮೇಲಿನ ದಬ್ಬಾಳಿಕೆ ವಿರೋಧಿಸಿ ಕನ್ನಡದ ಅಸ್ತಿತ್ವ, ಉಳಿವಿಗಾಗಿ ಆರಂಭಗೊಂಡ ಹೋರಾಟದ ಫಲವೇ ಈ ಏಕೀಕರಣ ಎಂದು ತಿಳಿಸಿದರು. ಸನ್ನಡತೆಯಿಂದ ಮಾತ್ರ ವಿದ್ಯೆ, ಅಧಿಕಾರ, ಸಂಪತ್ತಿಗೆ ಮೌಲ್ಯ ಲಭಿಸಲಿದ್ದು ವಿದ್ಯಾರ್ಥಿಗಳು ಇದನ್ನು ಮನಗಾಣಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್,
ಕರ್ನಾಟಕ ಏಕೀಕರಣ ಹಾಗೂ ಕನ್ನಡ ರಾಜ್ಯೋತ್ಸವ ಎರಡೂ ಒಂದೇ ಅಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕಿದೆ. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರ ತ್ಯಾಗವನ್ನು ಅರಿತುಕೊಳ್ಳುವುದು ಅವಶ್ಯಕತೆಯಿದೆ. ಪತ್ರಕರ್ತರು, ಉಪನ್ಯಾಸಕರು, ಸಾಹಿತಿಗಳು, ವ್ಯಾಪಾರಿಗಳು, ಕಲಾವಿದರ ಸೇರಿದಂತೆ ಹಲವು ಕ್ಷೇತ್ರದವರು ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಇತಿಹಾಸವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಅರಿತುಕೊಂಡು ತಮ್ಮ ಭವಿಷ್ಯ ರೂಪಿಸಿಕೊಳ್ಳುವುದರೊಂದಿಗೆ ಸಮಾಜಕ್ಕೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮ ಕೊಡುಗೆ ನೀಡಬೇಕಿದೆ ಎಂದು ಕರೆ ನೀಡಿದರು.
ಶಿರಂಗಾಲ ಪದವಿಪೂರ್ವ ಕಾಲೇಜು ಉಪನ್ಯಾಸಕ ಹಂಡ್ರಂಗಿ ನಾಗರಾಜ್ ಅವರು ಏಕೀಕರಣ ಮತ್ತು ಸಾಹಿತ್ಯ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕಾಲೇಜು ಪ್ರಾಂಶುಪಾಲ ಹೆಚ್.ಬಿ.ಲಿಂಗಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ ಭಾರದ್ವಾಜ್ ಆನಂದತೀರ್ಥ, ಕನ್ನಡ ಸಿರಿ ಸ್ನೇಹ ಬಳಗದ ಪ್ರಮುಖ ಕೆ.ಕೆ.ನಾಗರಾಜ ಶೆಟ್ಟಿ ಸೇರಿದಂತೆ ಕಾಲೇಜು ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.
Back to top button
error: Content is protected !!