ಕಾರ್ಯಕ್ರಮ

ಕೂಡ್ಲೂರು “ಪೂರ್ಣಚಂದ್ರ” ಕುಟೀರದಲ್ಲಿ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಚಿಂತನ ಮಂಥನ.

ಕುಶಾಲನಗರ, ಸೆ 09: ಕುಶಾಲನಗರದ ಸಾಹಿತ್ಯ ಹಾಗೂ ಸಾಂಸ್ಕ್ರತಿಕ ವೇದಿಕೆ ವತಿಯಿಂದ ನಾಡು ಕಂಡ ಹಿರಿಯ ಸಾಹಿತಿ, ಸಂಶೋಧಕ, ಪಕ್ಷಿ, ಪರಿಸರ ರಕ್ಷಕ, ಕೆ.ಪಿ.ಪೂರ್ಣಚಂದ್ರತೇಜಸ್ವಿ ಅವರ ಸ್ಮರಣೆ ಕಾರ್ಯಕ್ರಮ ಕೂಡ್ಲೂರು ಗ್ರಾಮದ ಟಿ.ಆರ್.ಶರವಣಕುಮಾರ್ ಅವರ ನಿವಾಸ ” ಚಂದ್ರ ಕುಟೀರ ” ದಲ್ಲಿ ನಡೆಯಿತು.

ವಿಚಾರವಾದಿ ಹಾಗೂ ವಾಗ್ಮಿ ವಿ.ಪಿ.ಶಶಿಧರ್ ಈ ಸಂದರ್ಭ ಮಾತನಾಡಿ, ಕುವೆಂಪು ಕಾಲಘಟ್ಟದಲ್ಲಿ ಕನ್ನಡ ನಾಡು ಸಾಹಿತ್ಯಿಕವಾಗಿ ಹಾಗೂ ಸಾಂಸ್ಕ್ರತಿಕವಾಗಿ ಶ್ರೀಮಂತಗೊಂಡಷ್ಟು ಇತ್ತೀಚಿನ ದಶಕಗಳಲ್ಲಿ ಕಾಣುತ್ತಿಲ್ಲ.
ಕುವೆಂಪು ಸಾಹಿತ್ಯಿಕವಾಗಿ ಗಗನದ ಎತ್ತರಕ್ಕೇರಿದಾಗ್ಯೂ ಅವರ ಪುತ್ರ ಪೂರ್ಣಚಂದ್ರತೇಜಸ್ವಿ ಅಪ್ಪನ ನೆರಳಿನಿಂದ ಹೊರಬಂದು ಸ್ವತಃ ತಾವೇ ಸಾಹಿತ್ಯ ರಚನೆಗಳಲ್ಲಿ ತೊಡಗಿಸಿಕೊಂಡು ಹೆಸರು ಮಾಡಿದವರು.
ಸಾಹಿತ್ಯದಷ್ಟೇ ಪಕ್ಷಿಗಳ ವೈವಿಧ್ಯತೆ ಹಾಗೂ ಪರಿಸರದ ಬಗ್ಗೆಯೂ ತೇಜಸ್ವಿ ಹೆಚ್ಚಿನ ಒಲವು ಹೊಂದಿದ್ದರು. ತೇಜಸ್ವಿ ಒಡನಾಡಿಗಳು ಹಳ್ಳಿಗಳನ್ನು ತೊರೆದು ನಗರಗಳಿಗೆ ಆಕರ್ಷಿತರಾದರೆ ತೇಜಸ್ವಿ ನಗರ ತೊರೆದು ಹಳ್ಳಿಯ ಸುಂದರ ಪರಿಸರದತ್ತ ಒಲವು ಹೊಂದಿದ್ದರು. ತಮ್ಮ ತೋಟದಲ್ಲಿ ಬೆಳೆದ ಯಾವ ಬೆಳೆಗಳೂ ಆದಾಯ ತಂದು ಕೊಡದ್ದರಿಂದ ‘ನಿರುತ್ತರ ‘ ಎಂದು ವಿಡಂಭನಾತ್ಮಕವಾಗಿ ಹೆಸರಿಟ್ಟಿದ್ದರು ಎಂದು ಶಶಿಧರ್ ಹೇಳಿದರು.

ಆಶಯ ನುಡಿಗಳಾಡಿದ ಸಾಹಿತಿ ಕಣಿವೆ ಭಾರಧ್ವಜ್, ನೇರ ಹಾಗೂ ನಿಷ್ಟುರ ಸಾಹಿತಿಯಾಗಿದ್ದ ತೇಜಸ್ವಿಯವರ ನಡೆಯಲ್ಲಿ ಯಾವತ್ತೂ ನಾಟಕೀಯತೆ ಇರಲಿಲ್ಲ. ಹಾಗೂ ತಂದೆಯನ್ನು ಅವರು ಅನುಸರಿಸಲೇ ಇಲ್ಲ.
ಅವರಲ್ಲಿ ಸರಳತೆ ಇತ್ತು. ವಿಡಂಭನೆ, ವ್ಯಂಗ್ಯ, ತಮಾಷೆ ಎಲ್ಲವೂ ಇತ್ತು.
ಒಮ್ಮೆ ಜೆ.ಹೆಚ್.ಪಟೇಲರು ತೇಜಸ್ವಿಗೆ ಕರೆ ಮಾಡಿ ನಿಮ್ಮನ್ನು ಎಂಎಲ್ ಸಿ ಮಾಡಬೇಕಲ್ಲಾ ಎಂದಾಗ ಪಟೇಲ್ ರನ್ನು ತರಾಟೆಗೆ ತೆಗೆದುಕೊಂಡಿದ್ದರು.
ತೇಜಸ್ವಿ ಅವರ ಜೀವಿತಾವಧಿಯಲ್ಲಿ ಯಾವತ್ತೂ ರಾಜಕಾರಣವನ್ನು ವಿರೋಧಿಸಿದವರು.
ಯಾರ ಮುಲಾಜಿಗೂ ಒಳಗಾಗದೇ ನೇರವಾಗಿ ಪ್ರಶ್ನೆ ಮಾಡುವ ಸ್ವಭಾವ ಹೊಂದಿದ್ದರು ಎಂದರು.
ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಶಿಕ್ಷಕ ಮೆ.ನಾ.ವೆಂಕಟನಾಯಕ್ ಮಾತನಾಡಿ ಕುವೆಂಪು ಕಾಲಘಟ್ಟದ ಅವರ ಸಾಹಿತ್ಯ ಆಳುವ ಸರ್ಕಾರಗಳನ್ನು ನಡುಗಿಸುವಂತಿತ್ತು.
ಅಂತಹ ಸಾಹಿತಿಯ ಮಗನಾಗಿದ್ದ ತೇಜಸ್ವಿ ಯಾವತ್ತೂ ತಮ್ಮ ತಂದೆಯನ್ನು ಅನುಸರಿಸಲೂ ಇಲ್ಲ. ಅನುಕರಿಸಲೂ ಇಲ್ಲ.
ತಂದೆಯ ನೆರಳಿನಿಂದ ಹೊರ ಬಂದು ತಮ್ಮ ಸಾಹಿತ್ಯಿಕ ಶಕ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ದಾಖಲಿಸಿದವರು ಎಂದರು.
ಪೂರ್ಣ ಚಂದ್ರ ಕುಟೀರದ ಮಾಲೀಕ ಟಿ.ಆರ್.ಶರವಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಇತ್ತೀಚಿನ ದಶಕಗಳಲ್ಲಿ ಯುವ ಜನಾಂಗ ಸಾಹಿತ್ಯವನ್ನು ಓದುವುದೇ ಮರೆಯಾಗಿದೆ.
ಕುವೆಂಪು ಗಿಂತ ಅವರ ಪುತ್ರ ತೇಜಸ್ವಿಯವರ ಸಾಹಿತ್ಯ ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಹಾಗೂ ಆಡು ಭಾಷೆಯಲ್ಲಿದೆ. ತೇಜಸ್ವಿ ಅವರ ಸಾಹಿತ್ಯ ನನ್ನಲ್ಲಿ ಬಹಳಷ್ಟು ಪ್ರಭಾವಿ ಬೀರಿದ್ದರಿಂದಲೇ ನನ್ನ ಮನೆಗೆ ಪೂರ್ಣ ಚಂದ್ರ ಎಂದು ಹೆಸರು ಇಟ್ಟಿದ್ದಾಗಿ ಶರವಣಕುಮಾರ್ ಹೇಳಿದರು.
ಕುಶಾಲನಗರದ ಸರ್ಕಾರಿ ಪಿಯು ಕಾಲೇಜಿನ ಇತಿಹಾಸ ಉಪನ್ಯಾಸಕಿ ಶಾಂತಿ, ಅಥ್ಲೆಟಿಕ್ ತರಬೇತುದಾರ ವಸಂತಕುಮಾರ್ ಮಾತನಾಡಿದರು. ಕೆ.ಎಸ್.ಮಹೇಶ್,
ಕುಶಾಲನಗರ ಗಣಪತಿ ದೇವಾಲಯ ಅಭಿವೃದ್ದಿ ಸಮಿತಿ ಅಧ್ಯಕ್ಷ ಎಂ.ಕೆ.ದಿನೇಶ್,
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ, ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್, ಹಿತರಕ್ಷಣಾ ವೇದಿಕೆಯ ಸಂಚಾಲಕ ಕೆ.ಜಿ.ಮನು, ಉಪನ್ಯಾಸಕ ಎಂ.ನಂಜುಂಡಸ್ವಾಮಿ, ಪುರಸಭೆ ಸದಸ್ಯೆ ಜಯಲಕ್ಷ್ಮಿ, ಮೊಗಣ್ಣೇಗೌಡ, ದೇವರಾಜು, ರಾಜೇಶ್, ಚಂದ್ರು, ಮೋಹಿದ್ಧೀನ್ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!