ಕುಶಾಲನಗರ, ಆ 21: ಗಣೇಶೋತ್ಸವದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಕುಶಾಲನಗರ ನಗರ ಪೊಲೀಸ್ ಠಾಣೆಯ ವತಿಯಿಂದ ವಿಶ್ರಾಂತಿ ಗೃಹದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ನಗರ ಠಾಣೆಯ ಪೊಲೀಸ್ ನಿರೀಕ್ಷಕ ಬಿ.ಜಿ. ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಣೇಶೋತ್ಸವ ಆಚರಣೆ ವೇಳೆ ಎದುರಾಗಬಹುದಾದ ಸಮಸ್ಯೆಗಳು, ಅದಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು.
ಈ ವೇಳೆ ಮಾತನಾಡಿದ ಪೊಲೀಸ್ ನಿರೀಕ್ಷಕ ಪ್ರಕಾಶ್, ಪಿಒಪಿ ಗಣಪತಿ ಮೂರ್ತಿಗಳಿಗಿಂತ ಪರಿಸರ ಸ್ನೇಹಿಯಾಗಿರುವ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಡೆಯಬೇಕಿದೆ ಎಂದರು.
ಗಣೇಶ ಪ್ರತಿಷ್ಠಾಪನೆ ಬಗ್ಗೆ ಸಮಿತಿ ಮುಖಂಡರು ಠಾಣೆಗೆ ಅರ್ಜಿ ನೀಡಿ ಅನುಮತಿ ಪಡೆಯಬೇಕು ಎಂದು ಸೂಚಿಸಿದ ಅವರು, ವಿದ್ಯುತ್ ಸಂಪರ್ಕಕ್ಕೆ ಬೆಸ್ಕಾಂ ಕಚೇರಿಗಳಿಂದ ಸೂಕ್ತ ಅನುಮತಿ ಪಡೆಯುವುದು ಕಡ್ಡಾಯ. ಯಾವುದೇ ರೀತಿಯ ಗಲಭೆಗಳಿಗೆ ಆಸ್ಪದ ನೀಡಬಾರದು. ಆಯೋಜಕರು ಗಣೇಶ ವಿಸರ್ಜನೆ ವೇಳೆ ಅಹಿತಕರ ಘಟನೆ ನಡೆಯದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಿರಬೇಕು ಎಂದರು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಸಬಾರದು. ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಬಾರದು ಎಂದು ನಿರ್ದೇಶನ ನೀಡಿದರು. ಗೌರಿ ಗಣೇಶ ಪ್ರತಿಷ್ಟಾಪನೆ ಮಾಡುವವರು ಡಿ.ಜೆ ಬಳಸದಂತೆ ತಿಳಿಸಿದ ಅವರು ಕಾನೂನಿನ ಚೌಕಟಿನ ಒಳಗೆ ಕಾರ್ಯಕ್ರಮವನ್ನು ನಿಗದಿ ಪಡಿಸಿದ ಪೋಲಿಸ್ ಇಲಾಖೆಯ ನಿಬಂಧನೆಗಳ ಮೂಲಕ ಕಾರ್ಯಕ್ರಮಗಳನ್ನು ನಡೆಸುವಂತೆ ಸಲಹೆ ನೀಡಿದರು.
ಪುರಸಭೆ ಸೂಚಿಸಿರುವ ಸ್ಥಳದಲ್ಲಿಯೇ ಗಣಪತಿಯನ್ನು ವಿಸರ್ಜಿಸಬೇಕೆಂದು ತಿಳಿಸಿದರು. ಗೌರಿ-ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆವರೆಗೆ ಶಾಂತಿ ಸುವ್ಯವಸ್ಥೆ ಮತ್ತು ಕಾನೂನು ಪಾಲನೆ ಮಾಡುವದಕ್ಕೆ ಸಮಿತಿ ಮುಂದಾಗಬೇಕು ಎಂದರು.
ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ಶ್ರೀನಾಥ್ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶದ ಜನರನ್ನು ಒಗ್ಗೂಡಿಸಲು ಲೋಕಮಾನ್ಯ ಬಾಲಗಂಗಾಧರ ತಿಲಕ್ ಈ ಸಾರ್ವಜನಿಕ ಗಣೇಶೋತ್ಸವಕ್ಕೆ ನಾಂದಿ ಹಾಡಿದರು. ಅಂದಿನಿಂದ ಇಂದಿನವರೆಗೂ ಈ ಕಾರ್ಯ ನಡೆಯುತ್ತಲೇ ಬಂದಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಾದ ಗಣಪತಿ ವಿಗ್ರಹಕ್ಕಿಂತ ಮಣ್ಣಿನಿಂದ ತಯಾರಿಸಿದ ವಿಗ್ರಹಕ್ಕೆ ಪೂಜೆ ಸಲ್ಲಿಸಿದರೆ ಪರಿಸರ ಸಂರಕ್ಷಣೆ ಜತೆಗೆ ಸಾಂಪ್ರದಾಯಿಕ ಮೌಲ್ಯವನ್ನು ಉಳಿಸಿದಂತಾಗುತ್ತದೆ. ಗಣೇಶೋತ್ಸವ ಸಂದರ್ಭ ಚ್ಯುತಿ ಬರದಂತೆ ಅಸಭ್ಯವಾಗಿ ನಡೆದುಕೊಳ್ಳಬಾರದು
ಎಂದು ಸಲಹೆ ನೀಡಿದರು.
ಈ ಸಂದರ್ಭ ಅಪರಾಧ ವಿಭಾಗದ ಉಪ ನಿರೀಕ್ಷಕರಾದ ಗೀತಾ ಹಾಗೂ ಕುಶಾಲನಗರದ ವಿವಿಧ ಭಾಗದ ಗಣಪತಿ ಸೇವಾ ಸಮಿತಿಯ ಪ್ರಮುಖರು ಹಾಜರಿದ್ದರು.
Back to top button
error: Content is protected !!