ಕುಶಾಲನಗರ, ಆ 09: ಕುಶಾಲನಗರ ಅರಣ್ಯ ವಲಯದ ಅತ್ತೂರು ಮೀಸಲು ಅರಣ್ಯ ವ್ಯಾಪ್ತಿಯ ಹೇರೂರಿನಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದೆ. ಕಾಡಾನೆಗಳ ಹಾವಳಿಯಿಂದ ವ್ಯಾಪಕವಾಗಿ ಬೆಳೆ ನಾಶ ಉಂಟಾಗುತ್ತಿರುವ ಹಿನ್ನಲೆಯಲ್ಲಿ ರೋಸಿಹೋಗಿರುವ ಕೃಷಿಕ ವರ್ಗ, ಬೆಳೆಹಾನಿ ಪರಿಹಾರ ದೊರಕದಿದ್ದರೂ ಪರವಾಗಿಲ್ಲ, ಕಾಡಾನೆಗಳ ಹಾವಳಿ ನಿಯಂತ್ರಿಸಲು ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಹೇರೂರಿನ ಕೃಷಿಕ ಚಂದ್ರಶೇಖರ್ ಎಂಬವರ ಜಮೀನಿಗೆ ಲಗ್ಗೆಯಿಟ್ಟ ಕಾಡಾನೆಗಳು ಒಂದೇ ದಿನದಲ್ಲಿ ನೂರಾರು ಸಂಖ್ಯೆಯಲ್ಲಿ ಅಡಿಕೆ ಗಿಡಗಳಿಗೆ ಹಾನಿ ಮಾಡಿವೆ. 80 ಆಡಿಕೆ ಗಿಡಗಳನ್ನು ಬೇರು ಸಹಿತ ಕಿತ್ತು ಹಾಕಿರುವ ಕಾಡಾನೆಗಳು 40 ಕ್ಕೂ ಅಧಿಕ ಅಡಿಕೆ ಗಿಡಗಳನ್ನು ಮುರಿದು ಹಾಕಿರುವುದು ಕಂಡುಬಂದಿದೆ.
ಅರಣ್ಯ ಇಲಾಖೆ ವಿರುದ್ದ ತೀವ್ರ ಆಕ್ರೋಷ ವ್ಯಕ್ತಪಡಿಸಿದ ಬೆಳೆಗಾರರು, ಅರಣ್ಯ ಇಲಾಖೆ ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕಳೆದ 3 ತಿಂಗಳಿಂದ ನಿರಂತರವಾಗಿ ಕಾಡಾನೆಗಳು ಈ ಭಾಗದಲ್ಲಿರುವ ರೈತರ ಜಮೀನುಗಳಿಗೆ ನುಗ್ಗಿ ಬೆಳೆಹಾನಿ ಮಾಡುತ್ತಿವೆ.
ಸಮೀಪದ ಅರಣ್ಯ ಪ್ರದೇಶದಿಂದ ತೋಟದ ಬೇಲಿ ಮುರಿದು ಮರಿಯಾನೆ ಸಹಿತ ನುಗ್ಗಿರುವ ಕಾಡಾನೆಗಳ ಅಡಿಕೆ ಗಿಡಗಳನ್ನು ಧ್ವಂಸ ಮಾಡಿದೆ. ತಿನ್ನಲು ಬಳಕೆಯಾಗದ ಗಿಡಗಳನ್ನು ಅನಾವಶ್ಯಕವಾಗಿ ಕಾಡಾನೆಗಳು ನಾಶ ಮಾಡಿವೆ ಎಂದು ಚಂದ್ರಶೇಖರ್ ಅಳಲು ತೋಡಿಕೊಂಡಿದ್ದಾರೆ.
ಆರರಿಂದ ಏಳು ವರ್ಷದ ಗಿಡಗಳು ಇನ್ನೆರಡು ವರ್ಷಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಫಸಲು ನೀಡುತ್ತಿದ್ದವು. ಅಡಿಕೆ ಜೊತೆಗೆ ಕರಿಮೆಣಸುಬಳ್ಳಿ, ಕಾಫಿ ಗಿಡಗಳನ್ನು ನೆಲಸಮಗೊಳಿಸಿ, ನೀರಾವರಿ ಪೈಪ್ ಗಳನ್ನು ಸಹ ಆನೆಗಳು ಒಡೆದು ಹಾಕಿವೆ. ಇದುವರೆಗೆ ಒಟ್ಟು 200 ಕ್ಕೂ ಅಧಿಕ ಅಡಿಗೆ ಗಿಡಗಳನ್ನು ಆನೆಗಳು ಮುರಿದುಹಾಕಿವೆ. ಇದರಿಂದ ತನಗೆ 4 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅವರು ತಿಳಿಸಿದರು.
ಹವಾಮಾನ ವೈಪರೀತ್ಯ ಒಂದೆಡೆ, ಮತ್ತೊಂದೆಡೆ ಕಾಡಾನೆಗಳ ಹಾವಳಿ, ಅರಣ್ಯ ಇಲಾಖೆಯ ಅಸಹಾಕಾರದಿಂದ ಕೃಷಿ ಮಾಡದಂತಹ ಪರಿಸ್ಥಿತಿ ಎದುರಾಗಿದೆ ಎಂದು ಕೃಷಿಕ ಅರುಣ್ ಆಕ್ರೋಷ ವ್ಯಕ್ತಪಡಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಪರಿಶೀಲನೆ ನಡೆಸಿದರು.
ಕಾಡಾನೆ ಹಾವಳಿ ತಡೆಗಟ್ಟಲು ಸೋಲಾರ್ ಬೇಲಿ, ರೈಲ್ವೇ ಬ್ಯಾರಿಕೆಡ್ ಅಳವಡಿಸಲು ಕ್ರಮಕೈಗೊಳ್ಳುವಂತೆ ರೈತರು ಅಧಿಕಾರಿಯನ್ನು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಅರಣ್ಯಾಧಿಕಾರಿ ಈ ಬಗ್ಗೆ ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು.
ಈ ಸಂದರ್ಭ ಕೃಷಿಕರಾದ ನಂಜೇಗೌಡ, ಗಣೇಶ್, ಮೋಕಿತ್, ಬಸಪ್ಪ, ಮನಿಲ್, ಪ್ರತೀಕ್ ಮತ್ತಿತರರು ಇದ್ದರು.
Back to top button
error: Content is protected !!