ಕ್ರೈಂ

ಸಿದ್ದಾಪುರದಲ್ಲಿ ನಿಧಿಗಾಗಿ ಶೋಧ, ಬಲಿಪೂಜೆಗೆ ಸಿದ್ದತೆ: ಐವರ ಬಂಧನ

ಸಿದ್ದಾಪುರ,ಜು 21: ನಿಧಿಯ ಆಸೆಗೆ ಮನೆಯ ಕೋಣೆಯಲ್ಲಿ ಗುಂಡಿ ತೋಡಿ ಶೋಧನೆ ಮಾಡಿದ ಆರು ಮಂದಿಯ ಮೇಲೆ ಪ್ರಕರಣ ದಾಖಲಿಸುವಲ್ಲಿ ಸಿದ್ದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಎಂ ಜಿ ಕಾಲೋನಿ ನಿವಾಸಿ ಆಸಿಫ್(30) ಎಂಬಾತ ಹಣದ ಆಸೆಗೆ ತನ್ನ ಮನೆಯ ಕೋಣೆಯಲ್ಲಿ ಗುಂಡಿ ತೋಡಿ ಸಿಕ್ಕಿ ಹಾಕಿಕೊಂಡ ಬೂಪ.
ಬಂಧಿತ ಯುವಕನ ಮನೆಯಲ್ಲಿ ಪ್ರತಿನಿತ್ಯ ನಾಗರ ಹಾವು ಕಾಣಿಸುತ್ತಿದ್ದು ಈ ವಿಚಾರವನ್ನು ತನ್ನ ಸ್ನೇಹಿತನಾದ ಮೂರ್ನಾಡಿನ ಅತೀಕ್ ಎಂಬುವವರ ಬಳಿ ಹೇಳಿದ ಹಿನ್ನೆಲೆಯಲ್ಲಿ ಆತ ಕಾಸರಗೋಡಿನಿಂದ ಓರ್ವ ಉಸ್ತಾದ್ ರನ್ನು ಕರೆತಂದು ಪ್ರಾರ್ಥನೆ ಮಾಡಿದ ಸಂಧರ್ಭದಲ್ಲಿ ಆತ ಯುವಕನ ಮನೆಯ ಮೂರನೇ ಕೋಣೆಯಲ್ಲಿ ನಿಧಿ ಇದ್ದು ಆ ಕಾರಣದಿಂದ ಹಾವು ಬರುತ್ತಿರುವುದಾಗಿ ಹೇಳಿದ್ದಾನೆ. ಶ್ರೀಮಂತನಾಗುವ ಬಯಕೆಯಲ್ಲಿ ಕುಶಾಲನಗರದ ಹಂಸ ಎಂಬಾತನ ನೆರವಿನೊಂದಿಗೆ ನಿಧಿ ಶೋಧಕ ಯಂತ್ರವನ್ನು ಹೊಂದಿರುವ ವ್ಯಕ್ತಿಯನ್ನು ಕರೆತಂದು ಪರಿಶೀಲಿಸಿದ ಸಂಧರ್ಭದಲ್ಲಿ ಮೂರನೇ ಕೋಣೆಯಲ್ಲಿ ನಿಧಿ ಇರುವುದಾಗಿ ಯಂತ್ರದ ಪರಿಶೋಧನೆಯಲ್ಲಿ ಕಂಡುಬಂದಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ತಡ ಮಾಡದೇ ಕೋಣೆಯಲ್ಲಿ ಗುಂಡಿ ತೋಡಲು ಪ್ರಾರಂಭಿಸಿದ್ದಾನೆ. ತದ ನಂತರ ಯಂತ್ರದಲ್ಲಿ ತಪಾಸಣೆ ಮಾಡಿದ ಸಂಧರ್ಭದಲ್ಲಿ ನಿಧಿ ಇರುವುದಾಗಿ ಯಾವುದೇ ಶಬ್ದ ಬಾರದ ಹಿನ್ನೆಲೆಯಲ್ಲಿ ವ್ಯಕ್ತಿಗಳು ತೆರಳಿದ್ದಾರೆ. ತದ ನಂತರ ಈ ವಿಚಾರವನ್ನು ಕುಶಾಲನಗರದ ಆರೀಫಾ ಮತ್ತು ಮಡಿಕೇರಿಯ ಫಾಹಿದ್ ಎಂಬುವವರ ಬಳಿ ಹೇಳಿದ ಹಿನ್ನೆಲೆಯಲ್ಲಿ ಮಾಟ,ಮಂತ್ರ ಮಾಡಿದರೆ ನಿಧಿ ಸಿಗಲಿದೆ ಎಂದು ಯುವಕನನ್ನು ನಂಬಿಸಿ ಮಾಟ,ಮಂತ್ರ ಮಾಡಿಸಲೆಂದು ತಮಿಳುನಾಡಿನಿಂದ ಕರ್ಪಸಾಮಿ ಹಾಗೂ ಆತನೊಂದಿಗೆ ಮೂವರನ್ನು ಯುವಕ‌ನ ಮನೆಗೆ ಕರೆ ತಂದಿದ್ದಾರೆ ಎನ್ನಲಾಗಿದೆ. ಈ ಸಂಧರ್ಭದಲ್ಲಿ ಪೂಜೆ ಮಾಡಲು ಸಿದ್ದತೆಗಳು ನಡೆದಿದ್ದು 35 ದಿನಗಳ ನಿರಂತರ ಪೂಜೆಯ ನಂತರ,ಸ್ಥಳದಲ್ಲಿ ಕೋಳಿಯನ್ನು ಬಲಿ ನೀಡಿದರೆ ನಿಧಿ ಸಿಗಲಿದೆ ಎಂದು ವ್ಯಕ್ತಿಯು ಹೇಳಿದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮನೆಯಲ್ಲಿ ಪೂಜೆಗಳು ನಡೆಯತೊಡಗಿತ್ತು. ನೆಲ್ಯಹುದಿಕೇರಿಯ ಎಂ ಜಿ ಕಾಲೋನಿಯಲ್ಲಿ ಅಕ್ರಮವಾಗಿ ನಿಧಿ ಶೋಧ ನಡೆಸುತ್ತಿರುವ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ ಸಂಧರ್ಭದಲ್ಲಿ ಮನೆಯ ಕೋಣೆಯ ಒಳಗಡೆ ಗುಂಡಿ ತೋಡಿರುವುದು ಹಾಗೂ ಪೂಜೆ ನಡೆಸಿರುವುದು ಪತ್ತೆಯಾಗಿದೆ.ಈ ಹಿನ್ನೆಲೆಯಲ್ಲಿ ಆಸಿಫ್ ನನ್ನು ವಿಚಾರಣೆಗೆ ಒಳಪಡಿಸಿದ ಸಂಧರ್ಭದಲ್ಲಿ ನಿಧಿಯ ಆಸೆಗೆ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.ಈ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆ ಪ್ರಕರಣದಲ್ಲಿ ಬಾಗಿಯಾದ ಒಟ್ಟು 6 ಮಂದಿಯ ಮೇಲೆ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧಕ ಮತ್ತು ನಿರ್ಮೂಲನೆ ಅಧಿ ನಿಯಮ 2017 ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಈ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದು ಇನ್ನಿತರರು ತಲೆಮರೆಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ರಾಜು ನೇತೃತ್ವದಲ್ಲಿ ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!