ಪ್ರತಿಭಟನೆ

ಕರ್ನಾಟಕ ಕಾವಲುಪಡೆ ವತಿಯಿಂದ ಪ್ರತಿಭಟನೆ

ಕುಶಾಲನಗರ ಸೆ 29: ಕರ್ನಾಟಕದಿಂದ ತಮಿಳುನಾಡಿಗೆ ನೀರು ಬಿಡುಗಡೆ ಖಂಡಿಸಿ ಕರ್ನಾಟಕ ಕಾವಲುಪಡೆ ವತಿಯಿಂದ ಪ್ರತಿಭಟನೆ ನಡೆಯಿತು.
ಕೊಡಗು-ಮೈಸೂರು ಗಡಿಭಾಗದ ಕಾವೇರಿ ಸೇತುವೆ ಸಮೀಪದ ಅರಣ್ಯ ತಪಾಸಣಾ ಗೇಟ್ ಬಳಿಯಿಂದ ಪ್ರತಿಭಟನೆ ಆರಂಭಿಸಿ ಕಾವೇರಿ ಮಾತೆ ಪ್ರತಿಮೆವರೆಗೆ ಮೆರವಣಿಗೆ ಸಾಗಲಾಯಿತು.
ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಅರಬೆತ್ತಲೆಯಾಗಿ ನದಿಗಿಳಿದು ಪ್ರತಿಭಟಿಸಲು ಮುಂದಾದ ಸಂದರ್ಭ ಕುಶಾಲನಗರ ಮತ್ತು ಬೈಲುಕೊಪ್ಪ ಠಾಣೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.
ಅರಬೆತ್ತಲೆಯಾಗಿ ಕೆಲಕಾಲ ಪ್ರತಿಭಟಿಸಿದ ಕಾರ್ಯಕರ್ತರು, ತಮಿಳುನಾಡು, ಕರ್ನಾಟಕ ಸರಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ, ರಾಜ್ಯದ ಜನರ, ರೈತರ ಹಿತ ಕಾಪಾಡಬೇಕಾದ ರಾಜ್ಯದ ಸರಕಾರ ತಮಿಳುನಾಡಿನ‌ ಜನರ ಹಿತ ಕಾಪಾಡಲು ಕದ್ದುಮುಚ್ಚಿ ನೀರು ಹರಿಸುತ್ತಿದೆ. ಇದು ಮುಂದುವರೆದರೆ ಕರ್ನಾಟಕದ ಜನರಿಗೆ ಕುಡಿಯಲು ನೀರು ಸಿಗುವುದಿಲ್ಲ.
ತಮಿಳುನಾಡಿನವರು ನಮ್ಮ ಸಹೋದರರು ಎಂದು ಉಲ್ಲೇಖಿಸುವ ರಾಜಕಾರಣಿಗಳು ಅಲ್ಲಿ ಹೋಗಿ ಚುನಾವಣೆಗೆ ಸ್ಪರ್ಧಿಸಲಿ. ಕೂಡಲೆ ನೀರು ಹರಿಸುವುದನ್ನು ಸ್ಥಗಿತಗೊಳಿಸದಿದ್ದಲ್ಲಿ ರಸ್ತೆಗಿಳಿದು ಬೃಹತ್ ಪ್ರತಿಭಟನೆ ಹನ್ಮಿಕೊಳ್ಳಲಾಗುವುದು ಎಂದರು.
ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಸುಬ್ರಮಣಿ ಮಾತನಾಡಿ, ರೈತರ ಮತಗಳಿಂದ ಗೆದ್ದ ಸರಕಾರ ಇಂದು ರೈತರಿಗೆ ದ್ರೋಹ ಎಸಗುವ ಕೆಲಸಕ್ಕೆ ಮುಂದಾಗಿದೆ. ರಾಜ್ಯದ ಸಂಸದರುಗಳು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಕೂಡಲೆ ಎಲ್ಲಾ ಸಂಸದರುಗಳು ರಾಜೀನಾಮೆ ನೀಡಿ ರೈತರ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು.
ಈ ಸಂದರ್ಭ ಕಾವಲುಪಡೆ ಪ್ರಮುಖರಾದ ಅಭಿಲಾಷ್, ಅರುಣ್, ಗಣೇಶ್, ಅಜೀಜ್, ಬಾಬು, ಕುಮಾರ, ನರೇಂದ್ರ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!