ಸುಂಟಿಕೊಪ್ಪ, ಜೂ 24: ದೈವ ಮಂದಿರಗಳು ಮನುಷ್ಯನ ಮಾನಸಿಕ ನೆಮ್ಮದಿಯ ಸುಂದರ ತಾಣಗಳು ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಕುಶಾಲನಗರ ತಾಲ್ಲೂಕಿನ ನಾಕೂರು ಶಿರಂಗಾಲ ಗ್ರಾಮದಲ್ಲಿ ಸ್ಥಳೀಯ ಬಸವೇಶ್ವರ ಸೇವಾ ಸಮಿತಿ ವತಿಯಿಂದ ಬಸವೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಇಂದಿನ ಆಧುನಿಕತೆಯ ನಾಗಾಲೋಟದ ಕಾಲಘಟ್ಟದಲ್ಲಿ ಮನುಷ್ಯ ಸಂಪತ್ತಿನ ಹಿಂದೆ ಓಡುತ್ತಿದ್ದಾನೆ ಹೊರತು ಅವನಿಗೆ ಬೇಕಾದಂತಹ ಸಂತಸ ಹಾಗೂ ಸಮಧಾನ ಸಿಗುತ್ತಿಲ್ಲ. ಹಾಗಾಗಿ ಮನುಷ್ಯನಿಗೆ ಬೇಕಾದಂತಹ ಶಾಂತಿ ಹಾಗೂ ನೆಮ್ಮದಿ ದೇವ ಮಂದಿರಗಳಲ್ಲಿ ದೊರಕುತ್ತದೆ ಎಂದು ಶ್ರೀಗಳು ಹೇಳಿದರು.
ಪ್ರಕೃತಿ ಮನುಷ್ಯನಿಗೆ ಬೇಕಾದಂತಹ ಎಲ್ಲವನ್ನು ನೀಡುತ್ತಿದೆ. ಆದರೆ ಪ್ರಕೃತಿಗೆ ನಾವೇನು ಕೊಡುತ್ತಿದ್ದೇವೆ ಎಂಬ ಆತ್ಮಾವಲೋಕನದ ತುರ್ತು ಅಗತ್ಯವಿದೆ.
ಮನುಷ್ಯರಾದ ನಾವೆಲ್ಲರೂ ಪರಸ್ಪರ ಸ್ನೇಹ, ವಿಶ್ವಾಸ ಹಾಗೂ ಸಹಬಾಳ್ವೆಯಿಂದ ಜೀವನ ಕಟ್ಟಬೇಕೆಂದು ಶ್ರೀಗಳು ಭಕ್ತರಿಗೆ ಕರೆಕೊಟ್ಟರು.
ಎರಡು ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ ವಿಧಿಗಳನ್ನು ನಾಗಮಂಗಲದ ಪ್ರಸನ್ನ ಶಾಸ್ತ್ರಿ ನೇತೃತ್ವದ ತಂಡ ನಡೆಸಿತು.
ದೇವಾಲಯ ಸಮಿತಿ ಅಧ್ಯಕ್ಷ ಡಿ.ಎನ್.ಧರ್ಮಪ್ಪ, ಕಾರ್ಯದರ್ಶಿ ಸಿ.ಡಿ.ಗಣೇಶ ಹಾಗೂ ಗ್ರಾಮದ ಬಸವೇಶ್ವರ ಸೇವಾ ಸಮಿತಿಯ ಜಿ.ಪಿ.ರಾಮಯ್ಯ, ಕೆ.ಆರ್.ಮಂಜುನಾಥ, ಪಂಚಾಕ್ಷರಿ, ಶಿವಕುಮಾರ್, ಬಿ.ಕೆ.ತಿಲಕ, ಚಿದು, ದಿಲೀಪ್, ವಾಸು, ವಸಂತ, ಜನಾರ್ಧನ, ಬ್ರಿಜೇಶ್ ಹಾಗೂ ಸದಸ್ಯರು ಇದ್ದರು.
ನೆರೆದಿದ್ದ ಭಕ್ತಗಣಕ್ಕೆ ದೇವಾಲಯ ಸಮಿತಿಯಿಂದ ಪ್ರಸಾದ ಅನ್ನಸಂತರ್ಪಣೆ ನೆರವೇರಿಸಲಾಯಿತು.
Back to top button
error: Content is protected !!