ಕಾರ್ಯಕ್ರಮ
ಹೆಬ್ಬಾಲೆ, ಕೂಡಿಗೆ ವ್ಯಾಪ್ತಿಯ ವಿವಿಧ ಹಾಡಿಗಳಿಗೆ ಶಾಸಕರ ಭೇಟಿ, ಪರಿಶೀಲನೆ
ಕುಶಾಲನಗರ, ಜೂ 25: ಹೆಬ್ಬಾಲೆ ಮತ್ತು ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಹಾಡಿಗಳಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಖುದ್ದಾಗಿ ಭೇಟಿ ನೀಡಿ ಹಾಡಿಯ ಜನರ ಸಮಸ್ಯೆಗಳನ್ನು ಆಲಿಸಿದರು.
ಚಿನ್ನೇನಹಳ್ಳಿ ಹಾಡಿಗೆ ಶಾಸಕರು ಭೇಟಿ ನೀಡಿದ ಸಂದರ್ಭದಲ್ಲಿ ಹಾಡಿಯ ಗ್ರಾಮಸ್ಥರು ಮನೆಗಳ ನಿರ್ಮಾಣ, ಚರಂಡಿ ದುರಸ್ತಿ, ಸಮುದಾಯದ ಭವನದ ದುರಸ್ತಿ, ಹಾಡಿಗಳಿಗೆ ಇಲಾಖೆಯ ವತಿಯಿಂದ ನೀಡಲಾಗುವ ಅಹಾರ ಕಿಟ್ ನಲ್ಲಿ ವ್ಯತ್ಯಾಸಗಳು ಕಂಡುಬರುತ್ತಿರುವ ಬಗ್ಗೆ, ಕಾಡಾನೆಗಳ ಹಾವಳಿ, ಹಾಡಿಯಲ್ಲಿ ನಿರ್ಮಾಣಗೊಂಡಿರುವ ಮನೆಗಳಿಗೆ ಇದುವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸದೆ ಇರುವ ಬಗ್ಗೆ ಶಾಸಕರ ಗಮನ ಸೆಳೆದರು.
ಶಾಸಕರು ಹಾಡಿಯ ಎಲ್ಲಾ ಭಾಗಗಳಿಗೆ ಭೇಟಿ ನೀಡಿ ಮನೆಗಳ ಪರಿಶೀಲನೆ ನಡೆಸಿ, ಹಾಡಿಯ ಗ್ರಾಮಸ್ಥರ ಸಮಸ್ಯೆಗಳನ್ನು ಕೂಲಂಕುಷವಾಗಿ ತಿಳಿದುಕೊಂಡು ಅವುಗಳನ್ನು ಪರಿಹರಿಸುವ ಬಗ್ಗೆ ಹಾಜರಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.
ನಂತರ ಶಾಸಕರು ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟದ ದಿಡ್ಡಳ್ಳಿ ಪುನರ್ವಸತಿ ಕೇಂದ್ರ ಮತ್ತು ಹುಣಸೇಪಾರೆ, ಭುವನಗಿರಿ ಗ್ರಾಮಗಳ ಹಾಡಿಗೆ ಭೇಟಿ ನೀಡಿ ಅಲ್ಲಿನ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಪರಿಹಾರವನ್ನು ಕಂಡುಕೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಮಾಜಿ ಸದಸ್ಯ ವಿ.ಪಿ. ಶಶಿಧರ್, ಕುಶಾಲನಗರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ರಾಜ್ಯ ಕೆ.ಪಿ.ಸಿ.ಸಿ ಸಂಯೋಜಕ ನಟೇಶ್ ಗೌಡ, ಕುಶಾಲನಗರ ತಾಲ್ಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ, ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ವೀರೇಂದ್ರ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕ ಸಿದ್ದೇಗೌಡ, ಹೆಬ್ಬಾಲೆ ಉಪ ವಲಯ ಅರಣ್ಯ ಅಧಿಕಾರಿ ಭರತ್, ಕುಶಾಲನಗರ ತಾಲ್ಲೂಕು ಅಹಾರ ನಿರೀಕ್ಷಣಾಧಿಕಾರಿ ಎಂ.ಎಸ್.ಸ್ವಾತಿ, ಚೆಸ್ಕಾಂ ಅಧಿಕಾರಿ ರಾಣಿ, ಹೆಬ್ಬಾಲೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಾದಪ್ಪ, ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯರಾದ ಟಿ.ಪಿ. ಹಮೀದ್, ಅನಂತ್, ಬಸವನಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಅರುಣ್ ರಾವ್, ಜಿಲ್ಲಾ ಐ.ಎನ್.ಟಿ.ಯು.ಸಿ ಘಟಕದ ಅಧ್ಯಕ್ಷ ಅಣ್ಣಯ್ಯ, ತೊರೆನೂರು ಸಹಕಾರ ಸಂಘದ ನಿರ್ದೇಶಕ ಕೃಷ್ಣೇ ಗೌಡ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು, ಹಾಡಿಯ ಮುಖ್ಯಸ್ಥರು ಹಾಜರಿದ್ದರು.