ಕಾರ್ಯಕ್ರಮ

ತೊರೆನೂರಿನಲ್ಲಿ ಜಿಲ್ಲಾ ಶಸಾಪ ದಿಂದ ಬಸವಣ್ಣನ ಲೋಕಸಂದೇಶ ಕಾರ್ಯಕ್ರಮ

ಕುಶಾಲನಗರ, ಜೂ 23 : ಹನ್ನೆರಡನೇ ಶತಮಾನದಲ್ಲಿ ಭಕ್ತಿ ಭಂಡಾರಿ ಬಸವಣ್ಣನು ಸಮಾಜಕ್ಕೆ ಸಾರಿದ ಸಂದೇಶಗಳು ಮನುಷ್ಯನ ಜೀವನವನ್ನು ಸನ್ನಡತೆಯ ದಾರಿಯಲ್ಲಿ ಒಯ್ಯುತ್ತವೆ ಎಂದು ತೊರೆನೂರಿನ ನಿವೃತ್ತ ಶಿಕ್ಷಕ ಟಿ.ಡಿ.ನರೇಂದ್ರನಾಥ್ ಹೇಳಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದ ಮಹಿಳಾ ಸ್ವಸಹಾಯ ಸಂಘದ ವತಿಯಿಂದ ತೊರೆನೂರಿನ ಬಸವೇಶ್ವರ ದೇವಾಲಯದಲ್ಲಿ ಜಂಟಿಯಾಗಿ ಆಯೋಜಿಸಿದ್ದ ” ಬಸವಣ್ಣನ ಜೀವನ ಸಂದೇಶಗಳು ” ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಅಂಟಿಕೊಂಡಿದ್ದ ಮೇಲು – ಕೀಳು, ಬಡವ – ಬಲ್ಲಿದನೆಂಬ ಜಾಡ್ಯವನ್ನು ತೊಳೆದು ಪರಸ್ಪರರಲ್ಲಿ ಸಮಾನತೆ, ಸೌಹಾರ್ದತೆಯನ್ನು ತರಲು ಜೀವನವನ್ನು ಸವೆಸಿದ ಬಸವಣ್ಣನವರು ಯಾವತ್ತಿಗೂ ವಿಶ್ವನಾಯಕರಾಗಿಯೇ ರೂಪುಗೊಂಡಿದ್ದಾರೆ.
ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಲು ವಚನಗಳನ್ನು ಕಲಿಸಬೇಕು. ಹಾಗೆಯೇ ವಚನಗಳಲ್ಲಿನ ಸಾರವನ್ನು ಅರ್ಥ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಮಕ್ಕಳನ್ನು ಎಚ್ಚರಿಸಬೇಕಿದೆ.
ಅದು ಬಿಟ್ಟು ಮೊಬೈಲ್ ದಾಸರಾಗಿ ಮಾಡಬಾರದು ಎಂದು ಅವರು ಕರೆಕೊಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಗ್ರಾಮೀಣ ಪ್ರದೇಶಗಳ ಜನ ಮಾನಸದಲ್ಲಿ ಕ್ರಾಂತಿ ಪುರುಷ ಬಸವಣ್ಣನ ಬಗ್ಗೆ ಮೊದಲು ಅರಿವು ಮೂಡಿಸಬೇಕಿದೆ. ಆ ಮುಖೇನ ಸ್ವಚ್ಚ ಸುಂದರವಾದ ನಾಡು ಕಟ್ಟಬಹುದಾಗಿದೆ. ಹಾಗಾಗಿ ಹಳ್ಳಿ ಹಳ್ಳಿಗಳಲ್ಲಿ ಬಸವಣ್ಣನ ಲೋಕ ಸಂದೇಶಗಳ ಅರಿವು ಮೂಡಿಸಲಾಗುತ್ತಿದೆ ಎಂದರು.
ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕರಾದ ಅಚ್ಯುತ್, ಮಹಿಳಾ ಸ್ವ ಸಹಾಯ ಸಂಘಗಳ ಒಕ್ಕೂಟಗಳ ಕಾರ್ಯದರ್ಶಿ ಅನ್ನಪೂರ್ಣೇಶ್ವರಿ, ಸೇವಾ ಪ್ರತಿನಿಧಿ ಟಿ.ಎಸ್.ನಾಗವೇಣಿ, ಸಚಿನ್, ರಾಜು, ಮಂಗಳಾ ಮೊದಲಾದವರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!