ವಿಶೇಷ

ಕುಶಾಲನಗರದಲ್ಲಿ‌ ಕಾವೇರಿ ನದಿಗೆ 133ನೇ ತಿಂಗಳ‌ ಮಹಾ ಆರತಿ

ಕುಶಾಲನಗರ,ಜು 14:
ಪ್ರಕೃತಿಯ ಆರಾಧನೆ ಮೂಲಕ ಅವುಗಳ ಸಂರಕ್ಷಣೆ ಉಳಿವು ಸಾಧ್ಯ ಎಂದು ಕುಶಾಲನಗರ ಗಣಪತಿ ದೇವಾಲಯ ಸೇವಾ ಸಮಿತಿಯ ಅಧ್ಯಕ್ಷರಾದ ವಿ ಎನ್ ವಸಂತಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಶ್ರೀ ಗಣಪತಿ ದೇವಾಲಯ ಸೇವಾ ಸಮಿತಿಯ ಸಹಯೋಗದೊಂದಿಗೆ ನಡೆದ 133 ನೇ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಕೃತಿ, ಪರಿಸರ, ನದಿ, ತೊರೆಗಳ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಆ ಮೂಲಕ ಮುಂದಿನ ಪೀಳಿಗೆಗೆ ಪ್ರಕೃತಿದತ್ತ ವ್ಯವಸ್ಥೆಯ ಹಸ್ತಾಂತರವಾಗಬೇಕಾಗಿದೆ ಎಂದರು.
ಕುಶಾಲನಗರ ಕಾವೇರಿ ಮಹಾ ಆರತಿ ಬಳಗ ಕಳೆದ 12 ವರ್ಷಗಳಿಂದ ನಿರಂತರವಾಗಿ ನದಿ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸುತ್ತಿರುವುದರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಅವರು, ಈ ಕಾರ್ಯದಲ್ಲಿ ಪ್ರತಿಯೊಂದು ಸಂಘ-ಸಂಸ್ಥೆಗಳು ಕೈಜೋಡಿಸಬೇಕಾಗಿದೆ ಎಂದು ಹೇಳಿದರು.
ಗುರುಪೂರ್ಣಿಮೆಯ ಅಂಗವಾಗಿ ನಡೆದ ಮಹಾ ಆರತಿ ಕಾರ್ಯಕ್ರಮ ಅಂಗವಾಗಿ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು ಅರ್ಚನೆ, ಅಷ್ಟೋತ್ತರ ನಂತರ ನದಿಗೆ ಮಹಾ ಆರತಿ ಬೆಳಗಿದರು. ಗುರುಪೂರ್ಣಿಮೆಯ ದಿನದ ಮಹತ್ವವನ್ನು ಅವರು ವಿವರಿಸಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಎನ್ ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಧಾರ್ಮಿಕವಾಗಿ ನದಿಯ ಸ್ವಚ್ಛತೆಯ ಬಗ್ಗೆ ಮಹತ್ವವನ್ನು ಜನರಿಗೆ ತಿಳಿಯಪಡಿಸುವ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದರು. ಸದ್ಯದಲ್ಲಿಯೇ ಕಾವೇರಿ ಆರತಿ ಕಟ್ಟೆಯ ನಿರ್ಮಾಣಕ್ಕೆ ಸಿದ್ಧತೆ ನಡೆಸುವ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಕುಶಾಲನಗರ ದೇವಾಲಯ ಒಕ್ಕೂಟ ಸಮಿತಿ ಪ್ರಮುಖರಾದ ರಾಮದಾಸ್, ಶ್ರೀನಿವಾಸರಾವ್, ವಿಜಯೇಂದ್ರ, ಪುಂಡರಿಕಾಕ್ಷ, ವೈಶಾಖ್, ಕಾವೇರಿ ಮಹಾ ಆರತಿ ಬಳಗದ ವನಿತಾ ಚಂದ್ರಮೋಹನ್, ಬೋಸ್ ಮೊಣ್ಣಪ್ಪ, ಶಿವಾನಂದನ್, ಸೋಮಶೇಖರ್, ಶಿವಶಂಕರ್, ಬಿಜೆಪಿ ನಗರ ಅಧ್ಯಕ್ಷ ಉಮಾಶಂಕರ್, ಮಹಿಳಾ ಭಜನಾ ಮಂಡಳಿ ಪ್ರಮುಖರು ಇದ್ದರು.
ಆರತಿ ಕ್ಷೇತ್ರದ ಫಲಕವನ್ನು ಗಣಪತಿ ದೇವಾಲಯ ಸೇವಾ ಸಮಿತಿಯ ಅಧ್ಯಕ್ಷರಾದ ವಿ ಎನ್ ವಸಂತ್ ಕುಮಾರ್ ಲೋಕಾರ್ಪಣೆಗೊಳಿಸಿದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!