ಕುಶಾಲನಗರ, ಮೇ 24: ಕುಶಾಲನಗರ ಪುರಸಭಾ ವ್ಯಾಪ್ತಿಯ ಕಾರು ಚಾಲಕರು ಮಾಲೀಕರ ಬಡಾವಣೆಯ ತಗ್ಗು ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ.
ರಾತ್ರಿ ಸರಿದ ಮಳೆಯ ಪರಿಣಾಮ ಮೇಲ್ ಪ್ರದೇಶದಲ್ಲಿ ಶೇಖರಣೆಗೊಂಡಿದ್ದ ನೀರು ಏಕಾಏಕಿ ಬೆಳಗ್ಗೆ ಹರಿಯಲು ಆರಂಭಿಸಿದೆ. ಕಟ್ಟಿನಿಂತಿದ್ದ ಮಳೆ ನೀರು ಒಮ್ಮೆಲ್ಲೇ ನುಗ್ಗಿ ಬರುತ್ತಿದ್ದು ಬಡಾವಣೆ ತಗ್ಗು ಪ್ರದೇಶ ಜಲಾವೃತಗೊಂಡಿದೆ.
ರೊಂಡೆಕೆರೆ ಭಾಗದಿಂದ ಹರಿದು ಬಂದು ತಾವರೆಕೆರೆ ಸೇರುವ ನಡುವೆ ಇರುವ ಈ ಬಡಾವಣೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಪ್ರತಿ ಮಳೆಗೂ ಜಲಾವೃತಗೊಳ್ಳುತ್ತಿದೆ.
ಮಳೆ ನೀರು ಹರಿದು ಸಾಗುವ ಸ್ವಾಭಾವಿಕವಾದ ತೋಡಿನ ಅಕ್ಕಪಕ್ಕದ ಮನೆಗಳಿಗೆ ಮಳೆಗಾಲದಲ್ಲಿ ತೀವ್ರ ಅನಾನುಕೂಲ ಸೃಷ್ಟಿಸುತ್ತಿದೆ.
ಜಲಾವೃತಗೊಳ್ಳುವ ಪ್ರದೇಶವಾದರೂ ಕೂಡ ಇಲ್ಲಿ ಹೆಚ್ಚಾಗಿ ನಿರ್ಮಾಣಗೊಳ್ಳುತ್ತಿರುವ ಮನೆಗಳು ಕೂಡ ನೀರಿನ ಸ್ವಾಭಾವಿಕ ಹರಿವಿಗೆ ಪರೋಕ್ಷವಾಗಿ ತಡೆಯುಂಟುಮಾಡುತ್ತಿವೆ. ನೀರು ಹರಿಯಲು ಮಾರ್ಗವಿಲ್ಲದೆ ಅಲ್ಲಲ್ಲಿ ಹೊಂಡಗಳಂತೆ ಕಟ್ಟು ನಿಲ್ಲುತ್ತಿದೆ. ಅವೈಜ್ಞಾನಿಕ ಬಡಾವಣೆ ನಿರ್ಮಾಣ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಡಾವಣೆ ಜಲಾವೃತಗೊಳ್ಳುತ್ತಿದೆ ಎನ್ನಬಹುದು.
Back to top button
error: Content is protected !!