ಪ್ರಕಟಣೆ

ಗುಡ್ಡೆಹೊಸೂರು ಗ್ರಾಪಂ ಸಾರ್ವಜನಿಕ ಪ್ರಕಟಣೆ: ಕನ್ನಡ ಬಳಕೆ ಕಡ್ಡಾಯ

ಕುಶಾಲನಗರ, ಮೇ 17: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ-2022 ಅನ್ವಯ ಎಲ್ಲಾ ಅಂಗಡಿ, ಹೋಟೆಲ್, ವಾಣಿಜ್ಯ ಸಂಕೀರ್ಣ, ಕೈಗಾರಿಕೋದ್ಯಮ, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನ ಕೇಂದ್ರಗಳು, ಶಾಲಾ – ಕಾಲೇಜು ಸರ್ಕಾರಿ ಕಚೇರಿಗಳು ಹಾಗೂ ಪ್ರವಾಸೋದ್ಯಮ ಕೇಂದ್ರಗಳನ್ನು ಒಳಗೊಂಡಂತೆ ಎಲ್ಲಾ ನಾಮಫಲಕಗಳಲ್ಲಿ ಕನಿಷ್ಠ ಶೇಕಡ 60 ರಷ್ಟು ಕನ್ನಡ ಭಾಷಾ ಬಳಕೆಗೆ ಕಡ್ಡಾಯವಾಗಿದ್ದು, ಎಲ್ಲರೂ ಸಹ ತಮ್ಮ ತಮ್ಮ ವ್ಯಾಪಾರ ವಹಿವಾಟು ಕೇಂದ್ರಗಳ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಭಾಷಾ ಬಳಕೆಗೆ ಪ್ರಾತಿನಿಧ್ಯ ನೀಡತಕ್ಕದ್ದು.

ಅಧಿನಿಯಮದ ಉಪಬಂದ 17(6) ರಂತೆ ಎಲ್ಲಾ ಉದ್ದಿಮೆ/ಸಂಸ್ಥೆಗಳ ಹೆಸರನ್ನು ಪ್ರದರ್ಶಿಸುವ ಫಲಕಗಳ ಮೇಲ್ಬಾಗದ ಅರ್ಧ ಭಾಗವು ಕನ್ನಡದಲ್ಲಿ ಇರತಕ್ಕದ್ದು. (ಕನಿಷ್ಠ ಶೇಕಡ 60)ಉದ್ದಿಮೆ/ಸಂಸ್ಥೆಗಳ ಮಾಲೀಕ ಅಥವಾ ಉಸ್ತುವಾರಿ ಹೊಂದಿದ ಯಾವುದೇ ವ್ಯಕ್ತಿಗಳು ಈ ವಿಧೇಯಕದ ಪ್ರಕರಣ 17ರ (6) ರಿಂದ (10) ಎವರೆಗಿನ ಉಪಬಂಧಗಳನ್ನು ಪಾಲಿಸಲು ವಿಫಲವಾದಲ್ಲಿ ಮೊದಲನೆಯ ಅಪರಾಧಕ್ಕಾಗಿ ರೂ. 5000/- ವರೆಗೆ ವಿಧಿಸಬಹುದಾದ ದಂಡ, ಎರಡನೇ ಬಾರಿಗೆ ವಿಫಲವಾದಲ್ಲಿ ರೂ 10,000/- ವರೆಗೆ ವಿಧಿಸಬಹುದಾದ ದಂಡ ಹಾಗೂ ಮೂರನೇ ಬಾರಿ ವಿಫಲನಾದಲ್ಲಿ ರೂ 20,000/- ವರೆಗೆ ವಿಧಿಸಬಹುದಾದ ದಂಡ ಹಾಗೂ ಪರವಾನಗಿಯನ್ನು ರದ್ದುಗೊಳಿಸಿ ಕಾನೂನು ಕ್ರಮಕ್ಕೆ ಗುರಿಯಾಗತಕ್ಕದ್ದು.

ಸದರಿ ಅಧಿನಿಯಮದ ಅನ್ವಯ ಗುಡ್ಡೆಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಉದ್ದಿಮೆ/ಸಂಸ್ಥೆಗಳ ಮಾಲೀಕ ಅಥವಾ ಉಸ್ತುವಾರಿ ಹೊಂದಿದ ಯಾವುದೇ ವ್ಯಕ್ತಿಗಳು ನಾಮಫಲಕಗಳಲ್ಲಿ ಕನಿಷ್ಠ ಶೇಕಡ 60 ರಷ್ಟು ಕನ್ನಡ ಭಾಷಾ ಬಳಕೆಯನ್ನು 26/05/2024ರ ಒಳಗಾಗಿ ಜಾರಿಗೆ ಅನುಷ್ಠಾನಗೊಳಿಸುವುದು. ತಪ್ಪಿದ್ದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ-2022 ಪ್ರಕರಣ 23 ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993, ಅನ್ವಯ ಸೂಕ್ತ ಕ್ರಮ ಜರುಗಿಸಲಾಗುವುದು.

Related Articles

Leave a Reply

Your email address will not be published. Required fields are marked *

Back to top button
error: Content is protected !!