ಅಪಘಾತ
ಕಾರು ಡಿಕ್ಕಿಯಾಗಿ ಮಹಿಳೆ ದುರ್ಮರಣ
ಕುಶಾಲನಗರ, ಏ 21: ಸಂಬಂಧಿಕರ ಮದುವೆಗೆಂದು ಬಂದಿದ್ದ ಮಹಿಳೆಯೊಬ್ಬರು ಮಾರುತಿ ಕಾರು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಭಾನುವಾರ ಸಂಜೆ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದಲ್ಲಿ ನಡೆದಿದೆ.
ಕಾಸರಗೋಡು ಮೂಲದ ರಾಬಿಯ ಮೃತ ದುರ್ದೈವಿ. 7ನೇ ಹೊಸಕೋಟೆಯಲ್ಲಿರುವ ಸಂಬಂಧಿಯ ವಿವಾಹ ಗದ್ದೆಹಳ್ಳದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮದುವೆಯಲ್ಲಿ ಪಾಲ್ಗೊಂಡು ತೆರಳುವ ಸಂದರ್ಭ ಗಿರಿಯಪ್ಪ ಮನೆ ಗದ್ದೆ ನಿವಾಸಿ ಪೊನ್ನಪ್ಪ ಎಂಬುವವರ ಪುತ್ರ ಶರತ್ ಎಂಬಾತ ವೇಗವಾಗಿ ಚಲಾಯಿಸಿಕೊಂಡು ಬಂದ ಮಾರುತಿ ಕಾರು ರಾಬಿಯ ಅವರಿಗೆ ಗುದ್ದಿ ಅವರೊಂದಿಗೆ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ರಾಬಿಯ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರು ಡಿಕ್ಕಿಯಾಗಿ ಗಾಯಗೊಂಡಿರುವ ಇನ್ನುಳಿದ ಮೂವರು ಮಹಿಳೆಯರು ಹಾಗೂ ಚಾಲಕ ಶರತ್ ನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.