ಸಾಮಾಜಿಕ

ಕುಶಾಲನಗರದಲ್ಲಿ ಬೃಹತ್ತ್ ವಾಕಥಾನ್,ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ

ಕುಶಾಲನಗರ ಮಾ 10: ಆಧುನಿಕತೆ ಭರಾಟೆಯಲ್ಲಿ ಹಾದಿ ತಪ್ಪದೆ, ಪೋಷಕರ ತ್ಯಾಗವನ್ನು ವಿದ್ಯಾರ್ಥಿಗಳು ಗೌರವಿಸಿ ಸುಶಿಕ್ಷಿತರಾಗಬೇಕಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವದ ಅಂಗವಾಗಿ ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಆಶ್ರಯದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಬಾನುವಾರ ಕುಶಾಲನಗರದಲ್ಲಿ ನಡೆದ ಬೃಹತ್ ವಾಕಥಾನ್ ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸರು ಕಷ್ಟಪಟ್ಟು ಹಿಡಿದ ಡ್ರಗ್ ಪೇಡ್ಲರ್ ಗಳನ್ನು ಬಿಡಿಸಲು ಯಾವುದೇ ವಕೀಲರು ಮುಂದೆ ಬರಬಾರದು. ಯುವಕರ ಜೀವನದ ಜೊತೆ ಚೆಲ್ಲಾಟವಾಡುವ ಇಂತಹ ಸಮಾಜ ದ್ರೋಹಿಗಳನ್ನು ಜೀವನ ಪರ್ಯಂತ ಜೈಲಿನಲ್ಲಿ ಕೊಳೆಯುವಂತೆ ಮಾಡಬೇಕು ಎಂದರು.

ಯುವ ಸಮೂಹ ಜಾಗೃತವಾಗಿ ಡ್ರಗ್ಸ್, ಸಿಗರೇಟ್, ಗಾಂಜಾ ಬಳಸುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಅಮೂಲ್ಯವಾದ ಜೀವಗಳನ್ನು ಉಳಿಸಬೇಕೆಂದರು.

ಡ್ರಗ್ಸ್ ಬಳಸುವವರ ಜೀವನ ಹಾಳಾಗುತ್ತದೆ. ಅವರಿಂದಾಗಿ ಅವರ ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕುತ್ತಾರೆ. ಅದರಿಂದ ಮಾಹಿತಿ ನೀಡುವ ಸಾರ್ವಜನಿಕರ ಮಾಹಿತಿಯನ್ನು ಪೊಲೀಸ್ ಇಲಾಖೆ ಗೌಪ್ಯವಾಗಿಡುತ್ತೆ. ಧೈರ್ಯವಾಗಿ ಇಲಾಖೆಯೊಂದಿಗೆ ಸಂಪರ್ಕ ಇಟ್ಟುಕೊಂಡು ಡ್ರಗ್ಸ್ ಮುಕ್ತ ಕೊಡಗು ನಿರ್ಮಾಣದಲ್ಲಿ ಎಲ್ಲರೂ ಕೈಜೋಡಿಸಲು ಮನವಿ ಮಾಡಿಕೊಂಡರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಕೆಲ ವರ್ಷಗಳ ಹಿಂದೆ ಸಾರ್ವಜನಿಕವಾಗಿ ಧೂಮಪಾನ ಮಾಡುವುದನ್ನ ಕಾಣುತ್ತಿದ್ದೆವು. ಈಗ ಅದಕ್ಕೆಲ್ಲ ದಂಡ ವಿಧಿಸಿ, ಸಾರ್ವಜನಿಕವಾಗಿ ಧೂಮಪಾನ ಮಾಡುವುದನ್ನು ತಪ್ಪಿಸುವಲ್ಲಿ ಇಲಾಖೆ ಸಾಕಷ್ಟು ಯಶಸ್ವಿಯಾಗಿದೆ. ಡ್ರಗ್ಸ್ ಮುಕ್ತ ಮಾಡಲು ಪೊಲೀಸ್ ಇಲಾಖೆಯೊಂದಿಗೆ ಜವಾಬ್ದಾರಿಯುತ ನಾಗರಿಕ ಸಮಾಜ ಕೈಜೋಡಿಸಿದರೆ ಮಾತ್ರ ಸಾಧ್ಯವಾಗಲಿದೆ. ಜನರಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಎಲ್ಲ ಕಡೆಗಳಲ್ಲೂ ಮಾಡುತ್ತಿದ್ದೇವೆ. ಡ್ರಗ್ಸ್ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳನ್ನು ವಿವರಿಸಿದರು. ಇಂತಹ ಸಮಾಜಘಾತುಕ ಜನರು ಸಂಪಾದನೆ ಮಾಡುವ ಹಣ ಉಗ್ರಗಾಮಿ ಕೆಲಸಕ್ಕೆ ಬಳಕೆಯಾಗುತ್ತದೆ ಮತ್ತು ದೇಶಕ್ಕೆ ಮಾರಕವಾಗಿರುವ ಕಪ್ಪು ಹಣವಾಗುತ್ತದೆ.

ಅದರಿಂದ ಯಾರು ಕೂಡ ಇಂತಹ ದುಶ್ಚಟಗಳಿಗೆ ದಾಸರಾಗದೆ ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕೆಂದು ಕರೆ ನೀಡಿದರು.

ಎಎಸ್ಪಿ ಸುಂದರ್ ರಾಜ್, ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ ಸೇರಿದಂತೆ ಕುಶಾಲನಗರ ಚೇಂಬರ್ ಅಪ್ ಕಾಮರ್ಸ್, ಲಯನ್ಸ್ ಕ್ಲಬ್ ರೋಟರಿ, ಜೆಸಿಐ, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಕೊಡಗು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಮತ್ತಿತರ ಸಂಘ ಸಂಸ್ಥೆಗಳ ಪ್ರಮುಖರು ಹಾಜರಿದ್ದರು.

ಕುಶಾಲನಗರದ ಸರಕಾರಿ ಇಂಜಿನಿಯರಿಂಗ್ ಕಾಲೇಜು ಬಳಿಯಿಂದ ಆರಂಭಗೊಂಡ ವಾಕಥಾನ್ ಜಿಎಂಪಿ ಶಾಲೆಯಲ್ಲಿ ಸಮಾಪ್ತಿಗೊಂಡಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!