ಕಾರ್ಯಕ್ರಮ

ವಚನಗಳ ಅರಿವಿನಿಂದ ಮಾನವೀಯ ಮೌಲ್ಯಗಳ ಹರಿವು…

ಶಸಾಪ ದಿಂದ " ಶರಣ ಸಾಹಿತ್ಯ ಪ್ರಸಾರ " ದತ್ತಿ ಕಾರ್ಯಕ್ರಮದಲ್ಲಿ ಸಾಹಿತಿ ವೆಂಕಟನಾಯಕ್ ಇಂಗಿತ....

ಕುಶಾಲನಗರ ಮಾ 10: ಇಂದಿನ ಮಕ್ಕಳಿಗೆ ವಚನಗಳನ್ನು ಕಡ್ಡಾಯವಾಗಿ ಕಲಿಸುವ ಮೂಲಕ ಉತ್ತಮ ವ್ಯಕ್ತಿಗಳಾಗಿ ರೂಪಿಸಲು ತಾಯಂದಿರ ಪಾತ್ರ ಬಹು ಮುಖ್ಯ ಎಂದು ಹೆಬ್ಬಾಲೆ ಪ್ರೌಢ ಶಾಲೆ ಕನ್ನಡ ಉಪನ್ಯಾಸಕರೂ ಆದ ಸಾಹಿತಿ ಮೆ.ನಾ.ವೆಂಕಟನಾಯಕ್ ಕರೆ ಕೊಟ್ಟರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಗಿರಗೂರಿನ ಗಿರಿಜೇಶ್ವರ ದೇವಾಲಯದ ಆವರಣದಲ್ಲಿ ಸುತ್ತೂರು ವೀರಸಿಂಹಾಸನ ಮಹಾ ಸಂಸ್ಥಾನದಿಂದ ಕೊಡ ಮಾಡಿದ ” ಶರಣ ಸಾಹಿತ್ಯ ಪ್ರಸಾರ ” ದತ್ತಿ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಎಳೆಯ ಮಕ್ಕಳಿಗೆ ತಾಯಂದಿರು ಹಾಲುಣಿಸುವಾಗಲೇ ವಚನಗಳ ಅರಿವನ್ನು ಮೂಡಿಸುವ ಮೂಲಕ ವಚನಗಳು ನಿತ್ಯದ ಬದುಕಿನ ಪ್ರಾರ್ಥನಾ ಗೀತೆಗಳಾಗಿಸಿದಲ್ಲಿ ಹನ್ನೆರಡನೇ ಶತಮಾನದ ಕಲ್ಯಾಣ ರಾಜ್ಯವನ್ನು ಕಾಣಲು ಸಾಧ್ಯವಾಗುತ್ತದೆ. ಮಹಿಳೆಯರು, ಮಕ್ಕಳು ಹಾಗೂ ಇಂದಿನ ತರುಣರು ಮೊಬೈಲ್ ಹಾಗೂ ಟಿವಿ ಸೀರಿಯಲ್ ವ್ಯಾಮೋಹ ಬಿಟ್ಟು ವಚನ ಸಾಹಿತ್ಯವನ್ನು ಓದುವುದನ್ನು ರೂಢಿಸಿಕೊಳ್ಳಲು ವೆಂಕಟನಾಯಕ್ ಕರೆಕೊಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಅಧ್ಯಕ್ಷ ಹೆಚ್.ವಿ.ಶಿವಪ್ಪ ಮಾತನಾಡಿ, ವಿಶ್ವದ ಮೇರು ಸಾಹಿತ್ಯವಾದ ವಚನ ಸಾಹಿತ್ಯವನ್ನು ನಾಡಿನಾದ್ಯಂತ ಪ್ರಸರಿಸುವ ಮಹುದುದ್ದೇಶದಿಂದ ಸುತ್ತೂರು ಜಗದ್ಗುರು ಲಿಂ. ರಾಜೇಂದ್ರ ಮಹಾಸ್ವಾಮೀಜಿ ಶರಣ ಸಾಹಿತ್ಯ ಪರಿಷತ್ತನ್ನು ಆರಂಭಿಸುವ ಮೂಲಕ ಶರಣರ ತತ್ವಗಳನ್ನು ನಾಡಿನಾದ್ಯಂತ ಪ್ರಸರಿಸುವ ಕೆಲಸ ಮಾಡಿದ್ದಾರೆ.
ವಚನ ಅಧ್ಯಯನ ಹಾಗೂ ಅರಿವು ಮನುಷ್ಯನಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕುಶಾಲನಗರ ವೀರಶೈವ ಸಮಾಜದ ಅಧ್ಯಕ್ಷ ಎಂ.ಎಸ್.ಶಿವಾನಂದ ಮಾತನಾಡಿ, ವಚನ ಸಾಹಿತ್ಯದ ಪಿತಾಮಹ ಬಸವಣ್ಣನನ್ನು ಸಾಂಸ್ಕ್ರತಿಕ ನಾಯಕರಾಗಿ ಘೋಷಿಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಚಿಂತನೆ ಶ್ಲಾಘನೀಯವಾದುದು ಎಂದರು.
ಗಿರಿಜೇಶ್ವರ ದೇವಾಲಯ ಧರ್ಮದರ್ಶಿ ಬಿ.ನಟರಾಜು, ಕೊಪ್ಪಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೀಲಾ ನಂದೀಶ್, ಪ್ರಗತಿ ಪರ ಕೃಷಿಕ ವಿಜಯಣ್ಣ, ಪಿರಿಯಾಪಟ್ಟಣದ ವೇದಾಗಮ ಪಂಡಿತ ಪುಟ್ಟಸ್ವಾಮಿ ಶಾಸ್ತ್ರಿ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ನಿಯೋಜಿತ ಅಧ್ಯಕ್ಷ ಕೆ.ಎಸ್.ಮೂರ್ತಿ, ಶಿಕ್ಷಕ ಸಂಗಮೇಶ್, ವಕೀಲ ಸಿ.ಎಸ್.ಮಂಜುನಾಥ್, ಚಿಕ್ಕಹೊಸೂರಿನ ಯಜಮಾನ ಪ್ರಭು, ಅಕ್ಕನ ಬಳಗದ ವಿಜಯಮ್ಮ, ಸರೋಜಾ ಆರಾಧ್ಯ, ರೇಖಾ ನಟರಾಜು ಮತ್ತಿತರರು ಇದ್ದರು.
ಇದೇ ಸಂದರ್ಭ ದೇವಾಲಯದ ವತಿಯಿಂದ ನಿಯೋಜಿತ ಶಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ ಅವರನ್ನು ಸನ್ಮಾನಿಸಿ ರಾಜೇಂದ್ರ ಶ್ರೀಗಳ ಭಾವಚಿತ್ರ ಕೊಡಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!