ಸುದ್ದಿಗೋಷ್ಠಿ

ಫೆ 23 ರಂದು ಕುಶಾಲನಗರದಲ್ಲಿ ಜಿಲ್ಲಾಮಟ್ಟದ ದೇವಸ್ಥಾನಗಳ‌ ಪರಿಷತ್ ಕಾರ್ಯಕ್ರಮ

ಕುಶಾಲನಗರ ಫೆ‌ 21:ದೇವಾಲಯಗಳ ಸಂರಕ್ಷಣೆ, ಸಂಘಟನೆ, ಧರ್ಮ ಶಿಕ್ಷಣದ ಉದ್ದೇಶದಿಂದ ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಫೆಬ್ರವರಿ 23 ರಂದು ಕುಶಾಲನಗರದ ರೈತ ಸಹಕಾರ‌ ಭವನದಲ್ಲಿ ಕೊಡಗು ಜಿಲ್ಲಾಮಟ್ಟದ ದೇವಸ್ಥಾನಗಳ ಪರಿಷತ್ತು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ‌ ಮಹಾಸಂಘದ ಪ್ರಮುಖ ಚಂದ್ರ ಮೊಗವೀರ ತಿಳಿಸಿದ್ದಾರೆ.

ಕುಶಾಲನಗರದ ಯೋಗಾನಂದ ಬಡಾವಣೆಯ ಮುತ್ತಪ್ಪ ದೇವಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರ ದೇವಸ್ಥಾನಗಳ‌ ಒಕ್ಕೂಟ, ಗೋಣಿಕೊಪ್ಪ ಹೊಸೂರಿನ ಶ್ರೀ‌ಮಹದೇಶ್ವರ ಸ್ವಾಮಿ ದೇವಸ್ಥಾನ, ಹಿಂದೂ ಜನಜಾಗೃತಿ ಸಮಿತಿಯ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳ ಮೇಲಿನ ವಿವಿಧ ರೀತಿಯ ಆಕ್ರಮಣಗಳ ಬಗ್ಗೆ ಪರಿಷತ್ತಿನಲ್ಲಿ ಚರ್ಚೆ ನಡೆಯಲಿದೆ. ಕೊಡಗು ಜಿಲ್ಲೆಯಿಂದ 300 ಕ್ಕೂ ಅಧಿಕ ಆಮಂತ್ರಿತ ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು, ಪುರೋಹಿತರು, ಪ್ರತಿನಿಧಿಗಳು, ದೇವಸ್ಥಾನಗಳ ರಕ್ಷಣೆಗಾಗಿ ಹೋರಾಡುವ ನ್ಯಾಯವಾದಿಗಳು, ಧಾರ್ಮಿಕ ಚಿಂತಕರು ಪರಿಷತ್ತಿನಲ್ಲಿ ಪಾಲ್ಗೊಳ್ಳಲಿದ್ದಾರೆ. ದೇವಾಲಯಗಳ ಆಡಳಿತ ಮಂಡಳಿ ಅರ್ಚಕರ‌ ನಡುವೆ ಬಾಂಧವ್ಯ, ಅರ್ಚಕರು ಭಕ್ತರ ನಡುವಿನ‌ ಬಾಂಧವ್ಯ ವೃದ್ದಿ, ದೇವಾಲಯಗಳ‌ ಜೀರ್ಣೋದ್ದಾರ, ಧಾರ್ಮಿಕ‌ ಕೇಂದ್ರವಾಗಿ ಪರಿವರ್ತಿಸುವುದು,
ದೇವಸ್ಥಾನಗಳ ಸರಕಾರೀಕರಣ ಸಂದರ್ಭ ಹೋರಾಡುವುದು, ದೇವಾಲಯಗಳನ್ನು ಅಪವಿತ್ರಗೊಳಿಸುವುದು, ಮೂರ್ತಿಭಂಜನ, ಅನಧಿಕೃತ ಹೆಸರಿನಲ್ಲಿ ದೇವಾಲಯಗಳನ್ನು ಧ್ವಂಸಗೊಳಿಸುವುದು, ದೇವಸ್ಥಾನಗಳ ಜಮೀನು ಲೂಟಿ, ದೇವನಿಧಿ ಅಪವವ್ಯ ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚಿಸಿ ದೇವತಾ ತತ್ವವನ್ನು ಕಾಪಾಡಲು, ಧರ್ಮಪ್ರಸಾರ ಮಾಡಲು, ದೇವಾಲಯಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ ಸಂಘಟನೆ ಮಾಡಲು, ವಸ್ತ್ರಸಂಹಿತೆ ಜಾರಿಗೊಳಿಸಲು ಈ ಪರಿಷತ್ ಮೂಲಕ ಸಾಧ್ಯವಾಗಲಿದೆ ಎಂದು ತಿಳಿಸಿದರು.

ಕುಶಾಲನಗರ ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ.ದಿನೇಶ್ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವಂತೆ ದೇವಾಲಯಗಳ‌ ಸಮಸ್ಯೆಗಳಿಗೆ ದನಿಎತ್ತಲು ಸಂಘಟಿತರಾಗುವ ಅವಶ್ಯಕತೆಯಿದೆ. ಎಲ್ಲಾ ದೇವಾಲಯಗಳನ್ನು ಒಂದೇ ವೇದಿಕೆಯಡಿ ತಂದು ಸಂಘಟಿತರಾಗಿಸುವ ಉದ್ದೇಶದಿಂದ ಈ ಪರಿಷತ್ ಆಯೋಜಿಸಲಾಗಿದೆ. ಇತರೆ ಧರ್ಮಗಳಿಗಿಂತ ಹಿಂದೂ‌ಗಳು ಧರ್ಮ ಬೋಧನೆಯಲ್ಲಿ ತೀರಾ ಹಿಂದುಳಿದಿದ್ದೇವೆ.
ನಮ್ಮ ಮುಂದಿನ ಪೀಳಿಗೆಗೆ ಧರ್ಮದ ಮಹತ್ವ ಸಾರುವ ಅಗತ್ಯವಿದೆ. ಈ ಸಮಾವೇಶದಲ್ಲಿ ದೇವಾಲಯಗಳ ಆಡಳಿತ ಮಂಡಳಿ ಮಂಡಳಿಯವರಿಗೆ ಸಮಸ್ಯೆ ನಿಭಾಯಿಸಲು ಧೈರ್ಯ ಹಾಗೂ ಶಕ್ತಿ ತುಂಬುವ ಕೆಲಸವಾಗಲಿದೆ ಎಂದರು.

ಗೋಣಿಕೊಪ್ಪ ಹೊಸೂರು ಮಹದೇಶ್ವರ ಸ್ವಾಮಿ ದೇವಸ್ಥಾನದ ಕೊಳ್ಳಿರ ಧರ್ಮಜ ಮಾತನಾಡಿದರು.

ಗೋಷ್ಠಿಯಲ್ಲಿ ಮುತ್ತಪ್ಪ ದೇವಾಲಯ ಕಾರ್ಯದರ್ಶಿ ಪವನ್, ಸಂಯೋಜಕ ವಿಜಯಕುಮಾರ್ ಸೇರಿದಂತೆ ಜನಜಾಗೃತಿ ಸಮಿತಿ ಹಾಗೂ‌ ಮುತ್ತಪ್ಪ ದೇವಾಲಯ ಸಮಿತಿ ಪ್ರಮುಖರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!