ಕುಶಾಲನಗರ, ಫೆ 18: ಕುಶಾಲನಗರ ತಾಲೂಕಿನ ಹೆಬ್ಬಾಲೆಯಲ್ಲಿ ಫೆ. 06 ರಂದು ನಡೆದಿದ್ದ ಹಿಟ್ ಅಂಡ್ ರನ್ ಪ್ರಕರಣ ಸಂಬಂಧ ಶನಿವಾರಸಂತೆ ಕಿಯಾ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹೆಬ್ಬಾಲೆ ಗ್ರಾಮದ ರಾಜ್ಯ ಹೆದ್ದಾರಿ-91 ರ ರಸ್ತೆಯಲ್ಲಿ ಫೆ.06 ಬೆಳಗಿನ ಸಮಯ 06.30 ಘಂಟೆಗೆ ಒಂದು ಗಂಡಸಿನ ಶವ ಪತ್ತೆಯಾಗಿದ್ದು, ಘಟನೆ ಸ್ಥಳಕ್ಕೆ ಸ್ಥಳೀಯ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಗಳು, ಸೀನ್ ಆಫ್ ಕ್ರೈಂ ತಜ್ಞರ ತಂಡ ಭೇಟಿ ನೀಡಿ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆಹಾಕಲಾಗಿದ್ದು, ಮೃತ ವ್ಯಕ್ತಿಯು ಅಪಘಾತದಿಂದ ಮೃತಪಟ್ಟಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದು ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಮೃತ ವ್ಯಕ್ತಿಯು ಮುಲ್ಕಿ ಮೂಲದ ಫೆಲಿಕ್ಸ್ ಡಿಸೋಜ ಎಂದು ತಿಳಿದಿದ್ದು, ಅದೇ ದಿನ ಮೃತ ಫೆಲಿಕ್ಸ್ ಡಿಸೋಜ ರವರ ಸಂಬಂಧಿಕರನ್ನು ಸಂಪರ್ಕಿಸಿ ಮೃತ ಶರೀರವನ್ನು ಹಸ್ತಾಂತರಿಸಲಾಗಿತ್ತು.
ಪಾದಚಾರಿಗೆ ಅಪಘಾತಗೊಳಿಸಿ ವಾಹನವನ್ನು ನಿಲ್ಲಿಸದೇ (Hit & Run) ತಲೆಮರೆಸಿಕೊಂಡಿರುವ ವ್ಯಕ್ತಿಯನ್ನು ಪತ್ತೆ ಹಚ್ಚಲು ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್.ಬಿ.ಜಿ ಹಾಗೂ ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಯನ್ನು ಕೈಗೊಂಡು ಮಾಹಿತಿ ಸಂಗ್ರಹಿಸಿ 16-02-2024 ರಂದು ಶನಿವಾರಸಂತೆ ಸಮೀಪ ಹುಲಸೆ ಗ್ರಾಮ ಶಿರಂಗಾಲ ನಿವಾಸಿಯಾದ ರಜಾಕ್ .ಎಂ.ಎಂ, (35 ವರ್ಷ) ಎಂಬವವನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಹಾಗೂ ಅಪಘಾತಗೊಳಿಸಿದ ವಾಹನ ಸಂಖ್ಯೆ: ಕೆಎ-51- ಎಂಪಿ-8173 ಕಿಯಾ ಸೆಲ್ಟೋಸ್ ಕಾರನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.
Back to top button
error: Content is protected !!