ಕುಶಾಲನಗರ ಜ 19: ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವತಿಯರು ಮಹಿಳೆಯರು ಪಾಲ್ಗೊಳ್ಳುವಂತೆ ಸಂಘಟನೆಗಳು ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ ಎಂದು ಕುಶಾಲನಗರದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಿ.ಎಲ್.ಉದಯಕುಮಾರ್ ಕರೆ ನೀಡಿದರು.
ಕುಶಾಲನಗರದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ಟ್ರಸ್ಟ್ ಮತ್ತು ವಾಸವಿ ಯುವತಿಯರ ಸಂಘದ ಸಂಯುಕ್ತಾಶ್ರಯದಲ್ಲಿ ವಾಸವಿ ಮಹಲ್ ಸಭಾಂಗಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತವನ್ನು ಸಂಸ್ಕರಿಸಿ ಅಗತ್ಯವಿದ್ದರಿಗೆ ಸಂಸ್ಥೆಗಳು ಕೊಡುವ ಮೂಲಕ ಅತ್ಯಂತ ಶ್ರೇಷ್ಠ ಸೇವೆಯನ್ನು ಮಾಡಲಾಗುತ್ತಿದೆ ಎಂದರು.
ಆರ್ಯವೈಶ್ಯ ಮಹಾಸಭಾದ ನಿರ್ದೇಶಕ ಬಿ.ಆರ್.ನಾಗೇಂದ್ರ ಪ್ರಸಾದ್ ಮಾತನಾಡಿ, ಆರೋಗ್ಯದ ದೃಷ್ಟಿಯಿಂದ ರಕ್ತದಾನ ಮಾಡುವುದು ಉತ್ತಮ ಎಂದರು. ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠವಾದದ್ದು. ರಕ್ತದ ಕೊರತೆಯಿಂದ ಹಲವರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ತಂತ್ರಜ್ಞಾನ ಉನ್ನತ ಮಟ್ಟದಲ್ಲಿ ಇರುವುದರಿಂದ ರಕ್ತವನ್ನು ಶೇಖರಿಸಿ, ಅವಶ್ಯವಿದ್ದಾಗ ನೀಡಿ ಜೀವ ರಕ್ಷಿಸುವ ಕೆಲಸವಾಗುತ್ತಿದೆ. ಅಂತಹ ನಿಸ್ವಾರ್ಥ ಸೇವೆ ಮಾಡುತ್ತಿರುವ ರಕ್ತ ಬ್ಯಾಂಕ್ ಗಳಿಗೆ ಸಾರ್ವಜನಿಕರು ರಕ್ತ ನೀಡುವ ಮೂಲಕ ಸಹಕಾರ ನೀಡಬೇಕೆಂದು ಕ ಹೇಳಿದರು.
ಶಿಬಿರದಲ್ಲಿ 36 ಜನರು ರಕ್ತದಾನ ಮಾಡಿದರು. ಪೊಲೀಸ್ ಸಿಬ್ಬಂದಿಗಳು ಪತ್ರಕರ್ತರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದು ಕಂಡು ಬಂತು.
ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಕವಿತಾ ಪ್ರವೀಣ್, ಮಹಿಳಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮಿ ಶ್ರೀನಿವಾಸ್, ವಾಸವಿ ಯುವಜನ ಸಂಘದ ಅಧ್ಯಕ್ಷ ಕೆ.ಪ್ರವೀಣ್, ಪುರಸಭಾ ಸದಸ್ಯ ಬಿ.ಅಮೃತ್ ರಾಜ್, ಯುವತಿಯರ ಸಂಘದ ಕಾರ್ಯದರ್ಶಿ ಸ್ನೇಹಾ, ಖಜಾಂಚಿ ಭೂಮಿಕಾ, ಜಿಲ್ಲಾ ಆರೋಗ್ಯ ಇಲಾಖೆಯ ಡಾ.ಕರಂಬಯ್ಯ ಮತ್ತು ಸಿಬ್ಬಂದಿಗಳು ಇದ್ದರು.
Back to top button
error: Content is protected !!