ಕಾರ್ಯಕ್ರಮ

ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆಯ (ನಿಫ್ಟೆಮ್) ಜೊತೆಗೆ ಕೊಡಗು ವಿಶ್ವವಿದ್ಯಾಲಯದ ಒಡಂಬಡಿಕೆ

ಕುಶಾಲನಗರ ಡಿ 9 : ತಮಿಳುನಾಡಿನ ತಂಜಾವೂರಿನಲ್ಲಿರುವ ಭಾರತ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆಯ ಜೊತೆಗೆ ಕೊಡಗು ವಿಶ್ವವಿದ್ಯಾಲಯವು ೦೫ ಜನವರಿ ೨೦೨೪ ರಂದು ಪರಸ್ಪರ ಒಡಂಬಡಿಕೆ ಮಾಡಿಕೊಂಡಿದೆ.

ಮೂಲತಃ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣೆಯ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ವಿಶ್ವ ದರ್ಜೆಯ ಕೇಂದ್ರವಾಗಿ ಕಾರ್ಯನಿರ್ವಹಿಸುವ ಉದ್ದೇಶದೊಂದಿಗೆ ಆರಂಭಗೊಂಡಿರುವ ಈ ಉನ್ನತ ಸಂಸ್ಥೆಯ ಜೊತೆಗೆ ಮುಂದಿನ ದಿನಗಳಲ್ಲಿ ಕೊಡಗು ವಿಶ್ವವಿದ್ಯಾಲಯವು ಪರಸ್ಪರ ಸಂಶೋಧನೆ, ಬೋಧನೆ, ಕೌಶಲ್ಯಭಿವೃದ್ಧಿ, ಔದ್ಯೋಗಿಕ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ, ತಂತ್ರಜ್ಞಾನ ವಿನಿಮಯ ಮಾಡಿಕೊಂಡು ಕೊಡಗು ವಿಶ್ವವಿದ್ಯಾಲಯದ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಲವಾರು ರೀತಿಯ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುವ ಮುಖ್ಯ ಉದ್ದೇಶದಿಂದ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂ. ಆಲೂರ ಅವರು ಹಾಗೂ ನಿಫ್ಟೆಮ್ ಸಂಸ್ಥೆಯ ತಂಜಾವೂರಿನ ನಿರ್ದೇಶಕ ಡಾ. ವಿ. ಪಳನಿಮುತ್ತು ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಈ ಸಂಸ್ಥೆಯ ಜೊತೆಗಿನ ಮಹತ್ವದ ಒಪ್ಪಂದದಿಂದ ಕೊಡಗು ವಿಶ್ವವಿದ್ಯಾಲಯದ ವ್ಯಾಪ್ತಿಯ ವಿದ್ಯಾವಂತ ಸಮುದಾಯವು ಆಹಾರ ತಂತ್ರಜ್ಞಾನ, ಕೈಗಾರಿಕೆ, ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಉನ್ನತ ಜ್ಞಾನ ಸಂಪಾದಿಸಲು ಅನುಕೂಲವಾಗುತ್ತದೆ. ಹಾಗೆಯೇ ಆಹಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ವಿನೂತನ ಸಂಶೋಧನೆಗೆ ಹೊಸ ದಿಕ್ಕು, ಹೊಸ ಅವಿಷ್ಕಾರದ ಜೊತೆಗೆ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗಲಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂ. ಆಲೂರ ಅವರು ತಿಳಿಸಿದ್ದಾರೆ.

ನೂತನ ಕೊಡಗು ವಿಶ್ವವಿದ್ಯಾಲಯವು ಮಾರ್ಚ್-೨೦೨೩ ರಿಂದ ಸ್ಥಾಪನೆಗೊಂಡು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ತನ್ನ ಅಧಿ ನಿಯಮ ೧೯೫೬ ರ ಪ್ರಕರಣ ೨ (ಎಫ್) ಅಡಿಯಲ್ಲಿ ಮಾನ್ಯತೆ ಪಡೆದುಕೊಂಡಿದ್ದು, ಯುಜಿಸಿ ಅಡಿಯಲ್ಲಿ ಬರುವ ವಿವಿಧ ಪದವಿಗಳನ್ನು ನೀಡಲು ಅಧಿಕೃತ ಮಾನ್ಯತೆ ಪಡೆದ ಕೊಡಗು ವಿಶ್ವವಿದ್ಯಾಲಯವು ಈಗಾಗಲೇ ೨೦೨೩-೨೪ನೇ ಶೈಕ್ಷಣಿಕ ಸಾಲಿನ ಕಾರ್ಯಚಟುವಟಿಕೆಯನ್ನು ಪ್ರಾರಂಭಿಸಿದೆ. ಕರ್ನಾಟಕದ ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆ ಮತ್ತು ಕರ್ನಾಟಕ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಬೆಂಗಳೂರಿನ ಫೋರ್ಕ್ ಟೆಕ್ನಾಲಜಿಸ್ ಸಹಯೋಗದೊಂದಿಗೆ ಕೊಡಗು ವಿಶ್ವವಿದ್ಯಾಲಯದ ಅಧ್ಯಾಪಕರುಗಳಿಗೆ ಕೌಶಲಾಭಿವೃದ್ಧಿ ಕಾರ್ಯಗಾರಗಳನ್ನು ಆಯೋಜಿಸಿದೆ. ಅಷ್ಟೇ ಅಲ್ಲದೇ ಧಾರವಾಡದ ಬಹು ಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರ, ಭಾರತ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಹೈದರಾಬಾದಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆ ಹಾಗೂ ಪ್ರಾಜೆಕ್ಟ್ ಕಾವೇರಿ ಎಂಬ ಹೆಸರಿನಲ್ಲಿ ಕೊಡಗು ಅಂಚೆ ಇಲಾಖೆಯ ಜೊತೆಗಿನ ಒಡಂಬಡಿಕೆ ಸೇರಿದಂತೆ ಇದು ಐದನೇ ಒಡಂಬಂಡಿಕೆಯಾಗಿರುವುದು ಗಮನಾರ್ಹ ಸಂಗತಿಯಾಗಿದೆ.

ಎರಡೂ ಸಂಸ್ಥೆಗಳ ಪರಸ್ಪರ ಒಡಂಬಡಿಕೆಯ ಸಂದರ್ಭದಲ್ಲಿ ಬೀದರ್ ವಿವಿಯ ಕುಲಪತಿಗಳಾದ ಪ್ರೊ. ಬಿ. ಎಸ್. ಬಿರಾದಾರ್, ಚಾಮರಾಜನಗರ ವಿವಿಯ ಕುಲಪತಿಗಳಾದ ಪ್ರೊ.ಗಂಗಾಧರ, ಹಾಸನ ವಿವಿಯ ಕುಲಪತಿಗಳಾದ ಪ್ರೊ.ತಾರಾನಾಥ, ಹಾವೇರಿ ವಿವಿ ಕುಲಪತಿಗಳಾದ ಪ್ರೊ. ಸುರೇಶ ಜಂಗಮಶೆಟ್ಟಿ, ಕೊಪ್ಪಳ ವಿವಿಯ ಕುಲಪತಿಗಳಾದ ಪ್ರೊ. ರವಿ ಬಿ.ಕೆ., ಬಾಗಲಕೋಟೆಯ ವಿವಿಯ ಕುಲಪತಿಗಳಾದ ಪ್ರೊ. ಆನಂದ ದೇಶಪಾಂಡೆಯವರು, ತಂಜಾವೂರಿನ ನಿಫ್ಟೆಮ್ ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!