ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮಕ್ಕಳಿಂದ ಕೆಸರು ಗದ್ದೆ ಕ್ರೀಡಾಕೂಟ
ಕುಶಾಲನಗರ, ಆ 22: ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೂಡ್ಲೂರು ಗ್ರಾಮದ ಬಸವೇಶ್ವರ ದೇವಾಲಯ ಸಮಿತಿಯ ಸಹಯೋಗದೊಂದಿಗೆ ಕೂಡ್ಲೂರು ಗ್ರಾಮದ ಪ್ರಗತಿಪರ ಕೃಷಿಕರಾದ ಕೆ.ಎಸ್.ರಾಜಾಚಾರಿಅವರ ಗದ್ದೆಯಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ಕೆಸರುಗದ್ದೆ ಕ್ರೀಡಾಕೂಟ ಸಂಭ್ರಮ- ಸಡಗರದಿಂದ ನಡೆಯಿತು.
ಶಾಲೆಯ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ
(ಎನ್. ಎಸ್.ಎಸ್.) ಘಟಕ, ಎಸ್.ಡಿ.ಎಂ.ಸಿ.ಹಾಗೂ ವಿದ್ಯಾರ್ಥಿ ಸಂಘದ ಸಂಯುಕ್ತಾಶ್ರಯದಲ್ಲಿ
ಏರ್ಪಡಿಸಿದ್ದ ಗ್ರಾಮೀಣ
ಕೆಸರು ಗದ್ದೆ ಕ್ರೀಡಾಕೂಟ ಜನರ ಗಮನ ಸೆಳೆಯಿತು.
ಶಾಲಾ ವಿದ್ಯಾರ್ಥಿಗಳು
ಕೆಸರು ಗದ್ದೆಯಲ್ಲಿ ಬಿದ್ದೆದ್ದು ಆಟವಾಡಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಗದ್ದೆಯಲ್ಲಿ ಕೆಸರು ಮೆದ್ದಿಕೊಂಡು
ಹಗ್ಗಜಗ್ಗಾಟದಲ್ಲಿ ತೊಡಗಿದ್ದ
ವಿದ್ಯಾರ್ಥಿಗಳು ತಮ್ಮ ತಂಡ ಗೆಲುವು ಪಡೆಯಬೇಕು ಎಂದು ಹರ ಸಾಹಸದಿಂದ ತಮ್ಮ ಬಲವನ್ನು ಪ್ರದರ್ಶಿಸುತ್ತಿದ್ದುದು ಕಂಡುಬಂತು.
ವಿದ್ಯಾರ್ಥಿಗಳು
ಹಗ್ಗಜಗ್ಗಾಟ, 100 ಮೀ ಹಾಗೂ 200 ಮೀ. ಕೆಸರು ಗದ್ದೆ ಓಟ ಹಾಗೂ ಬಾಯಲ್ಲಿ ಚಮಚದ ಮೇಲೆ ನಿಂಬೆಹಣ್ಣು ಇಟ್ಟು ಗದ್ದೆಯಲ್ಲಿ ಓಡುವ ಸ್ಪರ್ಧೆಗಳೊಂದಿಗೆ
ಇನ್ನಿತರ ಕ್ರೀಡೆಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಕೆಸರು ಗದ್ದೆ ಕ್ರೀಡಾಕೂಟದ ಮಹತ್ವದ ಬಗ್ಗೆ ತಿಳಿಸಿದ ಶಾಲೆಯ ಮುಖ್ಯೋಪಾಧ್ಯಾಯರೂ ಆದ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್,
ಶಾಲಾ ಮಕ್ಕಳಲ್ಲಿ ಗ್ರಾಮೀಣ
ಕೃಷಿ ಚಟುವಟಿಕೆಗಳು ಹಾಗೂ ರೈತರ ಜೀವನದ ಕಷ್ಟಗಳ ಬಗ್ಗೆ
ಅರಿವು ಮೂಡಿಸಲು ಇಂತಹ ಕ್ರೀಡಾಕೂಟ ಸಂಘಟಿಸಲಾಗಿದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯ ಕೆ.ಕೆ.ಭೋಗಪ್ಪ ಮಾತನಾಡಿ, ಈ ಶಾಲೆಯ ಮುಖ್ಯ ಶಿಕ್ಷಕ ಪ್ರೇಮಕುಮಾರ್ ಮತ್ತು ಶಿಕ್ಷಕರ ವಿಶೇಷ ಆಸಕ್ತಿಯಿಂದ ಇದೇ ಮೊದಲ ಬಾರಿಗೆ
ಕೆಸರು ಗದ್ದೆ ಓಟದ ಸ್ಪರ್ಧೆ ಏರ್ಪಡಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಕೆಸರು ಗದ್ದೆ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ
ಗ್ರಾಮದ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಜವರೇಗೌಡ, ಇಂತಹ ಕ್ರೀಡಾಕೂಟಗಳು ಶಾಲಾ ಮಕ್ಕಳಿಗೆ ಕೃಷಿ ಜೀವನದ ಅನುಭವ ನೀಡುತ್ತವೆ ಎಂದರು.
ಪ್ರಗತಿಪರ ರೈತ ಕೆ.ಎಸ್.ರಾಜಾಚಾರಿ, ಎಸ್ ಡಿ ಎಂ ಸಿ ಸಮಿತಿಯ ಅಧ್ಯಕ್ಷ ಎಸ್.ಎನ್.ಪುಟ್ಟಸ್ವಾಮಿ,
ಸದಸ್ಯ ಜವರಯ್ಯ,
ಗ್ರಾಮ ಪಂಚಾಯತಿ ಸದಸ್ಯ ಕುಮಾರ್,
ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಬಿ.ಡಿ.ರಮ್ಯ, ಅನ್ಸಿಲಾ ರೇಖಾ, ವೈ.ಎಂ.ಸರಸ್ವತಿ,
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಶೌರ್ಯ ತಂಡದ ಪ್ರಮುಖರಾದ ಕೆ.ಆರ್.ನಾಗರಾಜು, ಸತೀಶ್, ಗಣೇಶ್, ಸುರೇಶ್ ಇದ್ದರು.
ವಿದ್ಯಾರ್ಥಿಗಳು ಕೆಸರುಗದ್ದೆಯಲ್ಲಿ ಪ್ರದರ್ಶಿಸಿದ ಕ್ರೀಡಾ ಚಟುವಟಿಕೆಗಳು ಪ್ರೇಕ್ಷಕರ ಗಮನ ಸೆಳೆದವು.
ಮಕ್ಕಳಿಗೆ ಆಟದ ಜೊತೆಗೆ ಕೃಷಿ ಹಾಗೂ ರೈತರು ಎದುರಿಸುವ ಸವಾಲುಗಳ ಬಗ್ಗೆ ಮಾಹಿತಿ ನೀಡಲಾಯಿತು.