ಕುಶಾಲನಗರ , ಜ. 02: ಕೂಡಿಗೆ ಗ್ರಾಮ ಪಂಚಾಯತಿಯ 2023-24 ನೇ ಸಾಲಿನ ಗ್ರಾಮ ಸಭೆಯು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಟಿ. ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ನಿಗದಿತ ಸಮಯದಲ್ಲಿ ಅನೇಕ ಇಲಾಖೆಯ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದರು. ಆದರೆ ಒಂದು ಗಂಟೆಗಳ ಕಾಲ ನಂತರ ಕೆಲ ಇಲಾಖೆಯ ಅಧಿಕಾರಿಗಳು ಬಂದ ನಂತರ ಸಭೆಯು ಆರಂಭಗೊಂಡಿತು.
ಸಭೆಯಲ್ಲಿ ಪ್ರಮುಖವಾಗಿ ಮದಲಾಪುರ ಗ್ರಾಮದಲ್ಲಿರುವ. ಸರ್ವೆ ನಂಬರ್ 2/3 ರ ಜಾಗದಲ್ಲಿ ಕಳೆದ 12 ವರ್ಷಗಳ ಹಿಂದೆ ಪೈಸಾರಿ ಜಾಗದಲ್ಲಿ ಅರೋಗ್ಯ ಇಲಾಖೆಯ ವತಿಯಿಂದ ಹೆಬ್ಬಾಲೆ ಉಪ ಅರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣವಾಗಿದೆ. ಅದರೆ ಖಾಸಗಿ ವ್ಯಕ್ತಿಯೊಬ್ಬರು ಸದರಿ ಕಟ್ಟಡ ಅತಿಕ್ರಮಿಸಿಕೊಂಡಿದ್ದಾರೆ ಎಂದು ಅವರನ್ನು ಅಲ್ಲಿಂದ ತೆರವುಗೊಳಿಸುವಂತೆ ಮದಲಾಪುರ ಬ್ಯಾಡಗೊಟ್ಟ, ಮಲ್ಲೇನಹಳ್ಳಿ, ಹುದುಗೂರು ಗ್ರಾಮ ವ್ಯಾಪ್ತಿಯ ಗ್ರಾಮಸ್ಥರು ಸಭೆಯಲ್ಲಿ ಒತ್ತಾಯ ಮಾಡಿದರು.
ಗ್ರಾಮಸ್ಥರ ಪ್ರಮುಖ ಬೇಡಿಕೆಯಾದ ಪೈಸಾರಿ ಜಾಗವಾಗಿರುವ ಸರ್ವೆ ನಂಬರ್ 1 ರಲ್ಲಿ 4. ಎಕರೆ 27 ಸೆಂಟ್ ಊರುಗಪ್ಪೆ ಜಾಗವನ್ನು ಸಮರ್ಪಕವಾದ ದಾಖಲೆಗಳನ್ನು ಸಂಗ್ರಹಿಸಿ ಸರ್ವೆ ನಡೆಸಿ ಕೊಡುವಂತೆ ಗ್ರಾಮಸ್ಥರು ಅಗ್ರಹಿಸಿದರು.
ಸರಕಾರಿ ಕಟ್ಟಡಕ್ಕೆ ಅನಧಿಕೃತ ಪ್ರವೇಶ ಮಾಡಿರುವ ಖಾಸಗಿ ವ್ಯಕ್ತಿಯನ್ನು ತೆರವುಗೊಳಿಸುವಂತೆ ಗ್ರಾಮಸ್ಥರ ಒತ್ತಾಯಿಸಿದರು.
ಈ ವಿಷಯ ಸಂಬಂಧಿಸಿದ ಕಂದಾಯ ಇಲಾಖೆಯ ಪರಿವೀಕ್ಷಕ ಸಂತೋಷ್, ಮುಂದಿನ 10 ದಿನಗಳ ಒಳಗೆ ಸರ್ವೆ ನಡೆಸಿ ಜಾಗವನ್ನು ಗುರುತಿಸಲಾಗುವುದು ಎಂದು ಮಾಹಿತಿಯನ್ನು ನೀಡಿದರು.
ಆರೋಗ್ಯ ಕೇಂದ್ರ ಜಾಗದ ವಿಷಯದ ಬಗ್ಗೆ ಸಭೆಯಲ್ಲಿ ಪ್ರಸ್ತಾಪಗೊಂಡ ಸಂದರ್ಭದಲ್ಲಿ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಡಳಿತ ಮಂಡಳಿಯ ಸಭೆಯನ್ನು ನಡೆಸದೆ ಮನ ಬಂದಂತೆ ಗ್ರಾಮ ಪಂಚಾಯತಿಯಿಂದ ಎನ್. ಓ. ಸಿ.ಪತ್ರವನ್ನು ನೀಡಿರುವ ಬಗ್ಗೆ ಅಭಿವೃದ್ಧಿ ಅಧಿಕಾರಿಯನ್ನು ಮದಲಾಪುರ, ಬ್ಯಾಡಗೊಟ್ಟ ಸೇರಿದಂತೆ ನಾಲ್ಕು ಗ್ರಾಮಗಳ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಇದೇ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಗ್ರಾಮದ ಸರಕಾರಿ ಕಟ್ಟಡಕ್ಕೆ ಖಾಸಗಿವರಿಗೆ ನಿರಾಕ್ಷೇಪಣಾ (ಎನ್ .ಓ.ಸಿ.) ಪತ್ರವನ್ನು ನೀಡಿರುವ ಹಿನ್ನೆಲೆಯಲ್ಲಿ ಚೆಸ್ಕಾಂ ಇಲಾಖೆಯ ವಿದ್ಯುತ್ ಸಂಪರ್ಕ ನೀಡಿದ್ದಾರೆ. ಅದರಿಂದಾಗಿ ಅರೋಗ್ಯ ಇಲಾಖೆಯ ಕಟ್ಟಡದಲ್ಲಿ ಖಾಸಗಿಯವರು ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ತೆರವುಗೊಳಿಸುವಂತೆ, ಮತ್ತು ಅಭಿವೃದ್ಧಿ ಅಧಿಕಾರಿಯ ಮನಬಂದಂತೆ ವರ್ತನೆಯ ಬಗ್ಗೆ ಸಭೆಯಲ್ಲಿ ಪರ ವಿರೋಧಗಳ ಚರ್ಚೆಗಳು ನಡೆದು ಗ್ರಾಮಸ್ಥರುಗಳ ನಡುವೆ ಕೈ.ಕೈ.ಮಿಲಾಯಿಸುವ ಪ್ರಸಂಗ ಎದುರಾಯಿತು. ಪೋಲಿಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತು.
ಕಳೆದ 9 ತಿಂಗಳಿಂದ ನೀರು ಗಂಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ ವ್ಯಕ್ತಿಗೆ ಇದುವರೆಗೂ ಸಂಬಳವನ್ನು ನೀಡದ ಬಗ್ಗೆ ಅಧ್ಯಕ್ಷ ಮತ್ತು ಅಭಿವೃದ್ಧಿ ಅಧಿಕಾರಿಯನ್ನು ಸ್ಥಳೀಯರಾದ ಸುನಿಲ್ ರಾವ್, ರಾಜ, ಮಾದಪ್ಪ ತರಾಟೆಗೆ ತೆಗೆದುಕೊಂಡರು.
ಗ್ರಾಮ ಪಂಚಾಯತಿ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ನಿಮ್ಮ ಕರ ವಸೂಲಿಗಾರ ಬಗ್ಗೆ ಇದುವರೆಗೂ ಯಾವುದೇ ಕ್ರಮವನ್ನು ತಗೆದುಕೊಂಡಿಲ್ಲ ಎಂದು ಬಿ.ಡಿ.ಅಣ್ಣಯ್ಯ ಪ್ರಶ್ನಿಸಿದರು. ಇದಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಅಧಿಕಾರಿ ಮಂಜುಳ, ಇದೀಗ ಹಣವನ್ನು ಮರು ವಸೂಲಿ ಮಾಡಲಾಗಿದೆ ಎಂದರು.
ಅರಣ್ಯ ಇಲಾಖೆಯವರು ಸೀಗೆಹೊಸೂರು ಗ್ರಾಮದಲ್ಲಿನ 13/1 ರ ಪೈಸಾರಿ ಜಾಗಕ್ಕೆ ಅರಣ್ಯ ಇಲಾಖೆಯ ಬೋರ್ಡ್ ಅಳವಡಿಸಿದ ಬಗ್ಗೆ ಕಂದಾಯ ಇಲಾಖೆಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸುನಿಲ್ ರಾವ್ ಚರ್ಚಿಸಿದರು. ಮೇಲಧಿಕಾರಿಗಳ ಸೂಚನೆಯಂತೆ ಇಲಾಖೆಯ ಬೋರ್ಡ್ ಅಳವಡಿಕೆ ಮಾಡಲಾಗಿದೆ ಎಂದು ಅರಣ್ಯ ಇಲಾಖೆಯ ಹುದುಗೂರು ಉಪ ವಲಯ ಅರಣ್ಯ ಅಧಿಕಾರಿ ಸತೀಶ್ ಮಾಹಿತಿ ನೀಡಿದರು.
ಬೀದಿ ನಾಯಿಗಳ ಹಾವಳಿ, ಮಾಂಸದ ಅಂಗಡಿಗಳಲ್ಲಿ ಇಂಗು ಗುಂಡಿ ನಿರ್ಮಾಣ, ಹಾರಂಗಿ ನದಿಗೆ ಹರಿಯುವ ತ್ಯಾಜ್ಯ ನೀರು ತಡೆಗಟ್ಟಲು ಕ್ರಮವಹಿಸುವ ಬಗ್ಗೆ ಗ್ರಾಮಸ್ಥರು ಆಗ್ರಹ ಮಾಡಿದರು.
ಸಭೆಯಲ್ಲಿ ಗ್ರಾಮದ ವ್ಯಾಪ್ತಿಯ ವಿವಿಧ ಸಮಸ್ಯೆಗಳು, ಪರಿಹಾರವನ್ನು ಕಂಡುಕೊಳ್ಳಲು ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.
ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಇಲಾಖೆಯ ಮಾಹಿತಿಯನ್ನು ನೀಡಿದರು.
ನೋಡಲ್ ಅಧಿಕಾರಿಯಾಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಯಾದವ್ ಬಾಬು, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಜಯಶ್ರೀ ಸೇರಿದಂತೆ ಸರ್ವ ಸದಸ್ಯರು ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು, ಮಲ್ಲೇನಹಳ್ಳಿ, ಮದಲಾಪುರ, ಬ್ಯಾಡಗೊಟ್ಟ, ಸೀಗೆಹೊಸೂರು, ಭುವನಗರಿ ಸೇರಿದಂತೆ ಉಪ ಗ್ರಾಮಗಳ ನೂರಾರು ಗ್ರಾಮಸ್ಥರು ಹಾಜರಿದ್ದರು.
Back to top button
error: Content is protected !!