ಧಾರ್ಮಿಕ

ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 29ನೇ ವರ್ಷದ ಪಂಪಾ ದೀಪೋತ್ಸವ

ಕುಶಾಲನಗರ, ಜ‌ 02:ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 29ನೇ ವರ್ಷದ ಪಂಪಾ ದೀಪೋತ್ಸವ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.

ಗೆಳೆಯರ ಬಳಗದಿಂದ ನಡೆದ ಪೂಜೋತ್ಸವ ಅಂಗವಾಗಿ ದೇವಾಲಯವನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯ ಆವರಣದಲ್ಲಿ ಆಕರ್ಷಕ ರಂಗೋಲಿ ರಚಿಸಿ ದೀಪಗಳನ್ನು ಹಚ್ಚಿ ವಿಶೇಷ ಮೆರುಗು ಕಲ್ಪಿಸಲಾಗಿತ್ತು.

ಬೆಳಗ್ಗಿನಿಂದಲೇ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು.

ದೇವಾಲಯದ ಅರ್ಚಕರಾದ ಕೃಷ್ಣಮೂರ್ತಿ ಭಟ್, ಸೋಮಶೇಖರ್ ಭಟ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ಜರುಗಿದವು. ಸಂಜೆ ಉತ್ಸವ ಮೂರ್ತಿಯ ಮೆರವಣಿಗೆ, ಕಾವೇರಿ ನದಿಯಲ್ಲಿ ತೀರ್ಥಸ್ನಾನ ನಂತರ ಪಂಪಾದೀಪವನ್ನು ನದಿಯಲ್ಲಿ ತೇಲಿಬಿಡಲಾಯಿತು. ಬಳಿಕ ದೇವಾಲಯದಲ್ಲಿ ಪಡಿಪೂಜೆ ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಅಯ್ಯಪ್ಪಸ್ವಾಮಿ‌ ಮಾಲಾಧಾರಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಅಯ್ಯಪ್ಪ ಸ್ತೋತ್ರಗಳನ್ನು ಪಠಿಸಿ ಭಜನೆ ನಡೆಸಿದರು. ಬಳಿಕ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು.

ದೇವಾಲಯದ ಆವರಣದಲ್ಲಿ ಭಕ್ತರು ದೀಪಗಳನ್ನು ಬೆಳಗಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭ ಪುರಸಭೆ ಸದಸ್ಯರಾದ ವಿ.ಎಸ್.ಆನಂದಕುಮಾರ್, ಗೆಳೆಯರ ಬಳಗದ ಎಚ್.ಎಂ.ಚಂದ್ರು, ಡಿ.ವಿ.ರಾಜೇಶ್, ರಾಕಿ, ಎಚ್.ಟಿ.ವಸಂತ್, ಗಿರೀಶ್, ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಗಣಪತಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!