ಕುಶಾಲನಗರ, ಜ 01: ಕೊಡಗು ವಿವಿಗೆ ಸಂಬಂಧಿಸಿದ ಸಮಸ್ಯೆಯನ್ನು ಬಿಜೆಪಿ ವರ್ಸಸ್ ಕಾಂಗ್ರೆಸ್ ಎಂಬಂತೆ ಬಿಂಬಿಸಿ ರಾಜಕೀಯ ಮಾಡಲಾಗುತ್ತಿದೆ ಎಂದು ದಲಿತ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ಡಿ.ಎಸ್.ನಿರ್ವಾಣಪ್ಪ ಆರೋಪಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ವಿವಿ ಅಸ್ತಿತ್ವಕ್ಕೆ ಬಂದ ನಂತರ ಕೆಲಸ ಕಳೆದುಕೊಂಡ ಬೋಧಕೇತರ ವರ್ಗದ 20 ಮಂದಿ ಉದ್ಯೋಗಕ್ಕಾಗಿ ಧರಣಿ ನಡೆಸುತ್ತಿದ್ದಾರೆ. ಅವರಿಗೆ ನಮ್ಮ ಸಂಘಟನೆಗಳು ಬೆಂಬಲ ನೀಡಿವೆ.
ಆದರೆ ವಿವಿಯ ಕುಲಸಚಿವ ಹಾಗೂ ಸ್ಥಳೀಯ ರಾಜಕೀಯ ಮುಖಂಡರೊಬ್ಬರ ವೈಯಕ್ತಿಯ ಸ್ವಾರ್ಥಕ್ಕೆ, ಹೊಸ ನೌಕರರ ನೇಮಕ ಮಾಡಿಕೊಳ್ಳುವ ಸಲುವಾಗಿ ದಶಕಗಳಿಂದ ಸೇವೆ ಸಲ್ಲಿಸಿದವರನ್ನು ವಜಾಗೊಳಿಸಲಾಗಿದೆ ಎಂದು ಆರೋಪಿಸಿದರು. ಕೆಲವರು ವಿವಿಯನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿದ್ದಾರೆ. ನೌಕರರ ಹೋರಾಟಕ್ಕೆ ಪ್ರತಿಯಾಗಿ ಪ್ರತಿಭಟನೆ ಹಮ್ಮಿಕೊಳ್ಳುತ್ತಿದ್ದಾರೆ. ಇದು ರಾಜಕೀಯ ಷಡ್ಯಂತ್ರ, ಕೊಡಗು ವಿವಿಯನ್ನು ರಾಜಕೀಯ ಅಡ್ಢೆಯಾಗಿಸುತ್ತಿದ್ದಾರೆ. ನೌಕರರು ವರ್ಸಸ್ ಅಧಿಕಾರಿಗಳ ಸಮಸ್ಯೆಯನ್ನು ಬಿಜೆಪಿ ವರ್ಸಸ್ ಕಾಂಗ್ರೆಸ್ ಎಂಬಂತೆ ಮಾಡುತ್ತಿದ್ದಾರೆ. ಇಷ್ಟು ವರ್ಷದ ಇಲ್ಲದ ಕೊಡಗು ವಿವಿ ಹಿತರಕ್ಷಣಾ ಬಳಗ ಎಂಬ ಹೆಸರಿನಲ್ಲಿ ಕೊಡಗು ವಿವಿಗೆ ಕಳಂಕ ತರುವ ಕೆಲಸ ಮಾಡಲಾಗುತ್ತಿದೆ. ಇದರಿಂದ ವಿವಿ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.
ಒಕ್ಕೂಟದ ಉಪಾಧ್ಯಕ್ಷ, ರಿಪಬ್ಲಿಕನ್ ಪಾರ್ಟಿ ರಾಜ್ಯ ಸಂಚಾಲಕ ಕೆ.ಬಿ.ರಾಜು ಮಾತನಾಡಿ, ಹೋರಾಟ ನಡೆಸುತ್ತಿರುವ ನೌಕರರ ಕೋರಿಕೆ ಮೇರೆಗೆ ನಮ್ಮ ಸಂಘಟನೆಗಳು ಅವರಿಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಕೈಜೋಡಿಸಲಾಗಿದೆ ಹೊರತು ಯಾವುದೇ ಆಮೀಷಕ್ಕೆ ಒಳಗಾಗಿ ಅಥವಾ ಸ್ವಯಂಪ್ರೇರಿತವಾಗಿ ಪ್ರತಿಭಟನೆ ಹಮ್ಮಿಕೊಂಡಿಲ್ಲ. ಈ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.
ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ ಮಾತನಾಡಿ, ವಿವಿಯ ಅತಿಥಿ ಉಪನ್ಯಾಸಕರೊಬ್ಬರ ಮೇಲೆ ಆಪಾದನೆ ಮಾಡಲಾಗುತ್ತಿದ್ದು ಇಷ್ಟು ಸಮಯದಿಂದ ಹೊರಬರದ ಇವರ ಮೇಲಿನ ವಿದ್ಯಾರ್ಥಿಗಳ ಆರೋಪಗಳು, ನೌಕರರು ಹೋರಾಟ ಆರಂಭಿಸಿದ ಬಳಿಕ ಬೆಳಕಿಗೆ ಬಂದಿದೆ ಎಂದರೆ ಅದು ವಿವಿಯ ಉನ್ನತ ಅಧಿಕಾರಿಯ ದುರುದ್ದೇಶದಿಂದ ಮಾತ್ರ. ಉನ್ನತ ಅಧಿಕಾರಿಯೇ ವಿವಿಯ ಹೆಸರನ್ನು ಕೆಡಿಸಲು ಪರೋಕ್ಷವಾಗಿ ಕಾರಣವಾಗಿದ್ದಾರೆ ಎಂದರು.
ಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಹೊನ್ನಪ್ಪ, ಸದಸ್ಯರಾದ ಮಂಜುನಾಥ್, ಸಣ್ಣಪ್ಪ ಇದ್ದರು.
Back to top button
error: Content is protected !!