ಸಭೆ

ನಂಜರಾಯಪಟ್ಟಣ ಗ್ರಾಪಂ ಕೆಡಿಪಿ ಸಭೆ: ಹುಲಿ,‌ಕಾಡಾನೆ ಹಾವಳಿ, ಪ್ರವಾಸಿಗರಿಗೆ ಅಸುರಕ್ಷತೆ ಬಗ್ಗೆ ಚರ್ಚೆ

ಕುಶಾಲನಗರ, ಡಿ‌ 28: ನಂಜರಾಯಪಟ್ಟಣ ಗ್ರಾಮಪಂಚಾಯ್ತಿಯ 2023-24ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ತ್ರೈಮಾಸಿಕ‌ ಸಭೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ‌ ಇಲಾಖೆಗೆ ಸಂಬಂಧಿಸಿದ ಸೌಲಭ್ಯಗಳ ಬಗ್ಗೆ ತಿಳಿಸಿದರು. ವಿವಿಧ ಇಲಾಖೆಗಳ ವತಿಯಿಂದ ಆಗಬೇಕಿರುವ ಕಾರ್ಯಗಳ ಬಗ್ಗೆ ಗ್ರಾಪಂ ಆಡಳಿತ ಮಂಡಳಿ ಸದಸ್ಯರು ಚರ್ಚಿಸಿದರು.

ನಂಜರಾಯಪಟ್ಟಣ ಗ್ರಾಮದಲ್ಲಿ ಪ್ರಮುಖ ಪ್ರವಾಸಿ ತಾಣ ದುಬಾರೆಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು ಕೊರೊನ ರೂಪಾಂತರಿ ಜೆಎನ್.1 ಬಗ್ಗೆ ಎಚ್ಚರವಹಿಸಬೇಕಿದೆ.‌ ಗ್ರಾಮದಲ್ಲಿ ಈಗಾಗಲೆ‌ ಕಾಡಾನೆಗಳ ಹಾವಳಿ‌ಯಿಂದ ಗ್ರಾಮಸ್ಥರು‌ ನಲುಗಿದ್ದಾರೆ. ಇದರ ನಡುವೆ ಬೃಹದಾಕಾರದ ಹುಲಿಯೊಂದು ಈ ಭಾಗದಲ್ಲಿ ಸಂಚರಿಸುತ್ತಿದೆ. ಈ‌ ಹಿಂದೆ ಹುಲಿ ದಾಳಿಗೆ ಜಾನುವಾರುಗಳು ಮೃತಪಟ್ಟಿದ್ದವು. ಈ ಹಿನ್ನಲೆಯಲ್ಲಿ ಹುಲಿಯಿಂದ ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಅಗತ್ಯ ಎಚ್ಚರಿಕೆ ಕ್ರಮ ವಹಿಸುವಂತೆ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಅರಣ್ಯ ಇಲಾಖೆ ಅಧಿಕಾರಿಗೆ ಸೂಚಿಸಿದರು. ಕಾಡಾನೆ ಹಾವಳಿ ತಡೆಗಟ್ಟಲು ಅಳವಡಿಸಿದ್ದ ರೈಲ್ವೇ ಬ್ಯಾರಿಕೆಡ್ ಹಲವು ಕಡೆ ನೆಲಕಚ್ಚಿದ್ದು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ, ಸೋಲಾರ್ ಫೆನ್ಸಿಂಗ್ ಬಗ್ಗೆ ಗಮನಹರಿಸಬೇಕು. ದುಬಾರೆಯಲ್ಲಿ ತೂಗುಸೇತುವೆಯಿಲ್ಲದೆ ನದಿ ದಾಟುವ ಪ್ರವಾಸಿಗರ ಜೀವಕ್ಕೆ ಸುರಕ್ಷರೆಯಿಲ್ಲದಂತಾಗಿದೆ. ತೂಗುಸೇತುವೆ ನಿರ್ಮಾಣಕ್ಕೆ ಅರಣ್ಯ ಇಲಾಖೆ‌ ಮನಸ್ಸು‌ ಮಾಡುತ್ತಿಲ್ಲ. ಪಂಚಾಯತ್ ವತಿಯಿಂದ ಪಾರ್ಕಿಂಗ್, ಶೌಚಾಲಯ ಮತ್ತಿತರ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಲಾಗಿದೆ. ನದಿ ದಾಟುವ ಪ್ರವಾಸಿಗರ ಕಾಲು ಜಾರಿ‌ ಬೀಳುವ ಮೂಲಕ‌ ದೇಹಕ್ಕೆ ಹಾನಿ‌ ಮಾಡಿಕೊಳ್ಳುತ್ತಿದ್ದಾರೆ. ಈ ಸಂಬಂಧ ಪ್ರವಾಸಿಗರು, ಸಾರ್ವಜನಿಕರು ಗ್ರಾಪಂ ಮೇಲೆ ಆರೋಪ ಮಾಡುತ್ತಿದ್ದಾರೆ.

ಈ ಅವ್ಯವಸ್ಥೆ ಬಗ್ಗೆ ಅರಣ್ಯ ಇಲಾಖೆ ಗಮನಹರಿಸಿ ತೂಗುಸೇತುವೆ ನಿರ್ಮಾಣವಾಗುವ ತನಕ ಪ್ರವಾಸಿಗರ ಅನುಕೂಲಕ್ಕೆ ಪರ್ಯಾಯ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಬೇಕಿದೆ.

ಗ್ರಾಪಂ ವತಿಯಿಂದ ಎರಡು ಮೋಟಾರ್ ಬೋಟ್ ಖರೀದಿಗೆ ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಗ್ರಾಪಂ ವ್ಯಾಪ್ತಿಯ ಹಾಡಿ ನಿವಾಸಿಗಳಿಗೆ ಚೆಸ್ಕಾಂ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಲು ಚೆಸ್ಕಾಂ ಕ್ರಮವಹಿಸಬೇಕಿದೆ. ಜಂಗಲ್ ಕಟ್ಟಿಂಗ್ ಮೂಲಕ ಸಂಭಾವ್ಯ ವಿದ್ಯುತ್ ಅವಘಡ ತಪ್ಪಿಸಲು ಮುಂದಾಗುವಂತೆ ಸೂಚಿಸಿದರು.

ಜಾನುವಾರುಗಳ ಚಿಕಿತ್ಸೆ, ಸ್ಮಶಾನ, ಕೆರೆಗಳಿಗೆ ದಾರಿ ಸಮಸ್ಯೆ, ಮಳೆಹಾನಿ ಪರಿಹಾರ ಧನ ವಿಳಂಭ, ವೈರಸ್ ಹಾವಳಿ ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆ, ಪಡಿತರ ಚೀಟಿ, ಗೃಹಲಕ್ಷ್ಮಿ ಯೋಜನೆ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಕುಸುಮ, ಪಿಡಿಒ ರಾಜಶೇಖರ್, ಕಾರ್ಯದರ್ಶಿ ಶೇಷಗಿರಿ ಸೇರಿದಂತೆ ಸದಸ್ಯರುಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!