ಕಾರ್ಯಕ್ರಮ

ಕುಶಾಲನಗರದಲ್ಲಿ ಕೋಟಿ ಗೀತಾ ಲೇಖನ ಯಜ್ಞ ದೀಕ್ಷ ಕಾರ್ಯಕ್ರಮ

ಕುಶಾಲನಗರ ಡಿ 27: ಭಗವದ್ಗೀತೆ ಜಾಗತಿಕ ಹಾಗೂ ಜಾತ್ಯತೀತ ಗ್ರಂಥವೆಂದು ಉಡುಪಿ ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅವರು ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಕೋಟಿ ಗೀತಾ ಲೇಖನ ಯಜ್ಞ ದೀಕ್ಷ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ,
ತಾವು ಮಾಡುವ ಯಾವುದೇ ವೃತ್ತಿಯಲ್ಲಿ ಅಥವಾ ಜೀವನದಲ್ಲಿ ತೃಪ್ತಿ ಇಲ್ಲದೆ ಗೊಂದಲದಲ್ಲಿ ಸಿಲುಕಿರುವ ವೇಳೆ ಮನ ಶಾಂತಿಗಾಗಿ ಭಗವದ್ಗೀತೆ ಗ್ರಂಥ ಅಧ್ಯಯನ ಪ್ರಚಾರ ಹಾಗೂ ಬರವಣಿಗೆ ಸ್ವಯಂ ತೃಪ್ತಿ ತಂದುಕೊಡಲಿದೆ ಎಂದು ಶ್ರೀಗಳು ವ್ಯಾಖ್ಯಾನಿಸಿದರು.
ದೇಶ ವಿದೇಶಗಳಲ್ಲಿ ಭಗವದ್ಗೀತೆ ಅಭಿಯಾನ ನಡೆಯುತ್ತಿದ್ದು ವಿಶ್ವದಲ್ಲಿ ಗರಿಷ್ಠ ವ್ಯಾಖ್ಯಾನ ಹೊಂದಿರುವ ಗ್ರಂಥ ಭಗವದ್ಗೀತೆ ಪುಸ್ತಕ ವಾಗಿದ್ದು ಜಗತ್ತಿನ ಯಾವುದೇ ಗ್ರಂಥಗಳಿಗೆ ಈ ರೀತಿಯ ವ್ಯಾಖ್ಯಾನ ದೊರಕಿಲ್ಲ ಎಂದು ಶ್ರೀಗಳು ಹೇಳಿದರು.
ಜಾತಿ ಧರ್ಮ ಭೇದವಿಲ್ಲದ ಜಾಗತಿಕ ಗ್ರಂಥವಾದ ಭಗವದ್ಗೀತೆ ಜಗತ್ತಿಗೆ ಸತ್ಯವನ್ನೇ ಬೋಧಿಸಿದೆ ಎಂದರು.
ಪ್ರತಿಯೊಬ್ಬರೂ ಜೀವನದ ಉದ್ದೇಶ ಅರಿತು ಬಾಳಬೇಕು ಶ್ರೀ ಕೃಷ್ಣ ಅಂದರೆ ಭಕ್ತರಿಗೆ ವಿಶ್ವ ಬ್ಯಾಂಕ್ ಇದ್ದಂತೆ. ದೇವರಿಗೆ ಅರ್ಪಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ. ಭಕ್ತಿ ಪ್ರೀತಿ ಸೇವೆ ವಿವಿಧ ರೂಪದಲ್ಲಿ ಅದನ್ನು ಭಗವಂತನಿಗೆ ಹಿಂತುರುಗಿಸಬಹುದು. ಕೃಷ್ಣನ ಆರಾಧನೆ ಮೂಲಕ ಅನಂತ ಫಲ ಲಭಿಸಲು ಸಾಧ್ಯ ಎಂದ ಶ್ರೀಗಳು, ಭಕ್ತಿ ಸಂಪಾದನೆ ಯಾವುದೇ ಸಂದರ್ಭ ಕಳುವಾಗಲ್ಲ. ಜೀವನವನ್ನು ದೇವರಿಗೆ ಮೀಸಲಿರಿಸಬೇಕು ಎಂದರು.
ಗೀತೆಯ ಓದಿನ ಜೊತೆಗೆ ಬರವಣಿಗೆ ಲೇಖನ ಮೂಲಕ ಶ್ರೀ ಕೃಷ್ಣನಿಗೆ ಸಮರ್ಪಣೆ ಮಾಡಬೇಕಾಗಿದೆ. ಅಭಿಯಾನದ ಮೂಲಕ ಭಗವದ್ಗೀತೆ ಪ್ರತಿಯೊಬ್ಬರ ಮನೆಯ ಪೂಜಾ ಕೊಠಡಿಯಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದರು.
ಕೊಡಗು ಜಿಲ್ಲೆಯಲ್ಲಿ ವಿಶೇಷವಾಗಿ ಭಗವದ್ಗೀತೆಯ ಬಗ್ಗೆ ಬೆಳಕು ಚೆಲ್ಲುವ ಕಾಯಕ ಕೋಟಿಗೀತಾ ಲೇಖನ ಯಜ್ಞ ಯಶಸ್ವಿ ದಾರಿಯಲ್ಲಿ ಸಾಗುತ್ತಿದ್ದು ಜನತೆಯ ಸಂಕಲ್ಪ ಈಡೇರಲು ತನ್ನ ಆಶೀರ್ವಾದ ಇದೆ ಎಂದರು.

ಸಾಕ್ಷಾತ್ ಶ್ರೀ ಮಧ್ವಾಚಾರ್ಯರೇ ಶ್ರೀ ಮಧುಪೇಂದ್ರ ತೀರ್ಥ ಪೀಠದ ಮೂಲ ಯತಿಗಳಿಗೆ ಕರುಣಿಸಿದ ಸುಮಾರು 700ಕ್ಕೂ ಅಧಿಕ ವರ್ಷಗಳ ಪುರಾತನವಾದ ಪಟ್ಟದ ದೇವರಾಗಿದ್ದುಕೊಂಡು ಪ್ರತಿನಿತ್ಯ ಪೂಜೆ ನಡೆಸಿಕೊಂಡು ಬಂದ ಶ್ರೀ ರುಕ್ಮಿಣಿ, ಸತ್ಯಭಾಮ ಸಹಿತ ಶ್ರೀ ವೀರ ವಿಠಲ ಸಪರಿವಾರ ದೇವರಿಗೆ ಶ್ರೀಗಳು ಮಹಾಪೂಜೆ ನೆರವೇರಿಸಿದರು.

2026 ರ ಪರ್ಯಾಯದ ಅವಧಿಯ ಒಳಗಾಗಿ ಕೊಡಗು ಜಿಲ್ಲೆಯಿಂದ 10800 ಸಂಖ್ಯೆಯ ಭಗವದ್ಗೀತೆ ಪುಸ್ತಕಗಳನ್ನು ಬರೆದು ಮಠಕ್ಕೆ ನೀಡುವ ಸಂಕಲ್ಪ ಹೊಂದುವ ಗುರಿ ತಮ್ಮದಾಗಿದೆ ಎಂದರು.

ಶ್ರೀಗಳ ಶಿಷ್ಯರಾದ ಶ್ರೀ ಸುಶ್ರೀoದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಭಕ್ತ ಕೋಟಿ ಎಲ್ಲರೂ ಒಂದಾಗಿ ದೇವರ ಅನುಗ್ರಹದೊಂದಿಗೆ ಪ್ರಯತ್ನ ಮೂಲಕ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಗಳಿಸಿ ಎಂದು ಹೇಳಿದರು. ಭಗವದ್ಗೀತೆಯನ್ನು ಬರೆಯುವ ಪವಿತ್ರ ಕಾರ್ಯದೊಂದಿಗೆ ಧನ್ಯರಾಗಬಹುದು ಎಂದು ಅವರು ತಿಳಿಸಿದರು.

ಭಗವದ್ಗೀತೆಯ ಪೂರ್ಣಾವಧಿ ಪ್ರಚಾರಕರು ಸಂಕರ್ಷಣ ಪ್ರಮುಖರು ಆಗಿರುವ ವಿದ್ವಾನ್ ರಮಣ ಆಚಾರ್ಯ ಅವರು ಕೋಟಿ ಲೇಖನ ಯಜ್ಞ ಅಭಿಯಾನದ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.

ಶ್ರೀಗಳ ಬೃಹತ್ ಜಾಗತಿಕ ಧಾರ್ಮಿಕ ಸಂಕಲ್ಪ ಕೋಟಿ ಗೀತಾ ಲೇಖನ ಯಜ್ಞ ಅಭಿಯಾನಕ್ಕೆ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಅವರು ಕರೆ ನೀಡಿದರು.

ಕೋಟಿ ಗೀತಾ ಲೇಖನ ಯಜ್ಞ ಅಭಿಯಾನದ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಕುಶಾಲನಗರದ ಉದ್ಯಮಿ ಎಸ್ ಕೆ ಸತೀಶ್ ದಂಪತಿಗಳನ್ನು, ಮತ್ತು ಸಮಿತಿಯ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳಿಗೆ ಶ್ರೀಗಳು ಆಶೀರ್ವದಿಸಿದರು.

ಕೋಟಿಗೀತಾ ಲೇಖನ ಯಜ್ಞ ದೀಕ್ಷಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವರಿಗೂ ಶ್ರೀಗಳು ಪ್ರಸಾದ ಮಂತ್ರಾಕ್ಷತೆ ವಿತರಿಸಿದರು.

ಎರಡು ದಿನಗಳ ಕಾಲ ನಡೆದ ಅಭಿಯಾನ ಕಾರ್ಯಕ್ರಮದಲ್ಲಿ ಕೋಟಿಗೀತಾ ಲೇಖನ ಯಜ್ಞದ ಕೊಡಗು ಜಿಲ್ಲೆಯ ಸಮಿತಿ ಸಂಚಾಲಕರು ಹಿರಿಯ ಪತ್ರಕರ್ತರಾದ ಜಿ ಚಿದ್ವಿಲಾಸ್, ಸಮಿತಿಯ ಪ್ರಮುಖರಾದ ರಮಾ ವಿಜಯೇಂದ್ರ, ಪದ್ಮ ಪುರುಷೋತ್ತಮ್, ಜನಾರ್ದನ್ ವಸಿಷ್ಠ, ಲಕ್ಷ್ಮಿ ಮಂಜುನಾಥ್,, ಯೋಗ ಗುರು ಮಧುಸೂದನ್, ಚಿ.ನಾ ಸೋಮೇಶ್, ವಿ ಡಿ ಪುಂಡರಿಕಾಕ್ಷ, ಕೆಎಸ್ ರಾಜಶೇಖರ್, ಆರ್ ಕೆ ನಾಗೇಂದ್ರ ಬಾಬು, ಕೆ ಎನ್ ದೇವರಾಜು, , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ನಿರ್ದೇಶಕಿ ಲೀಲಾವತಿ, ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!