ಕಾರ್ಯಕ್ರಮ
ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಕುರಿತ ಕಾರ್ಯಾಗಾರ
ಹಸಿರು ಇಂಧನ ಬಳಕೆಗೆ ಹೆಚ್ಚಿನ ಒತ್ತು ಅಗತ್ಯ*: *ಶಾಸನ ಡಾ ಮಂಥರ್ ಗೌಡ*
ಕುಶಾಲನಗರ, ಡಿ.20 : ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ( ಕೆ.ಆರ್.ಇ.ಡಿ.ಎಲ್.) ವತಿಯಿಂದ
ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಯ ಸಂಯುಕ್ತಾಶ್ರಯದಲ್ಲಿ
ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ (ಡಿ.20 ರಂದು)
ನವೀಕರಿಸಬಹುದಾದ ಇಂಧನ / ಶಕ್ತಿ ಸಂಪನ್ಮೂಲಗಳ ಕುರಿತು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ ಮಂಥರ್ ಗೌಡ, ಮುಗಿದು ಹೋಗುತ್ತಿರುವ ಫಾಸಿಲ್ ಇಂಧನ ಮೂಲಗಳಿಗೆ ಪರ್ಯಾಯವಾಗಿ
ನಾವು ಪರಿಸರ ಸ್ನೇಹಿ ನವೀಕರಿಸಬಹುದಾದ
ಬದಲಿ ಇಂಧನ ಮೂಲಗಳ ಉತ್ಪಾದನೆ ಹಾಗೂ
ಬಳಕೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದರು.
ಇಂಧನ ಸಂರಕ್ಷಣೆ ಮತ್ತು ಶಕ್ತಿಯ ಸಮರ್ಥ ಬಳಕೆಯ ಕಡೆಗೆ ಹೆಚ್ಚಿನ ಗಮನ ಹರಿಸಲು ಇಂತಹ ಕಾರ್ಯಾಗಾರ ಸಹಕಾರಿಯಾಗಿದೆ.
ನಾವು ಪರಿಸರ ಸ್ನೇಹಿ ಇಂಧನ ಬಳಕೆ ಮಾಡುವ ಮೂಲಕ ಜಾಗತಿಕ ತಾಪಮಾನ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟಲು ದಿಟ್ಟ ಹೆಜ್ಜೆ ಇಡಬೇಕು. ನಾವು ನಮ್ಮ ಮನೆ, ಕಟ್ಟಡಗಳು, ಕಛೇರಿ ಹೀಗೆ ಲಭ್ಯವಿರುವ ಸ್ಥಳಗಳ ಮೇಲ್ಚಾವಣಿಯಲ್ಲಿ ಸೋಲಾರ್ ಪೆನಾಲ್ ಗಳನ್ನು ಅಳವಡಿಸುವ ಮೂಲಕ ನಮ್ಮ ಸ್ವಂತ ಬಳಕೆಗೆ ಸೌರಶಕ್ತಿ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು.
ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ.
ಜಾಗತಿಕ ತಾಪಮಾನ ಹಾಗೂ ಹವಾಮಾನ ವೈಪರೀತ್ಯಗಳಿಂದ ನಾವು ಎದುರಿಸುತ್ತಿರುವ ಪ್ರವಾಹ ಹಾಗೂ ಬರ ಪರಿಸ್ಥಿತಿಯ ಸವಾಲುಗಳನ್ನು ಎದುರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಎಲ್ಲರೂ ಪಣ ತೊಡಬೇಕು ಎಂದು
ಶಾಸಕ ಡಾ ಮಂಥರ್ ಗೌಡ ಹೇಳಿದರು.
ಜಿಲ್ಲೆಯ ಹಾರಂಗಿ ಅಣೆಕಟ್ಟಿನ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ನಿರ್ಮಿಸುವ ಇಂಗಿತ ವ್ಯಕ್ತಪಡಿಸಿದ ಶಾಸಕರು, ಇದರಿಂದ ನೀರಾವರಿ ಇಲಾಖೆಯ ವಿದ್ಯುತ್ ಬಿಲ್ ಪಾವತಿಯನ್ನು ತಪ್ಪಿಸುವ ಮೂಲಕ ಹಾರಂಗಿ ಅಣೆಕಟ್ಟು ಕಛೇರಿ ಬಳಕೆ ಜತೆಗೆ ಸ್ಥಳೀಯವಾಗಿ ಹೆಚ್ಚು ಸೌರ ವಿದ್ಯುತ್ ಉತ್ಪಾದಿಸಿ ಪವರ್ ಗ್ರಿಡ್ ಗೂ ನೀಡಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ ಎನ್.ಎಸ್. ಸತೀಶ್ ಮಾತನಾಡಿ, ಇಂದಿನ ದಿನಗಳಲ್ಲಿ ಇಂಧನ / ಶಕ್ತಿ ಬೇಡಿಕೆ ಹೆಚ್ಚುತ್ತಿರುವ ಕಾರಣದಿಂದಾಗಿ ಭವಿಷ್ಯತ್ತಿನ ದೃಷ್ಠಿಯಿಂದ ನಾವು ಸಾಂಪ್ರದಾಯಿಕ ಇಂಧನಕ್ಕೆ ಪರ್ಯಾಯವಾಗಿ ಸೌರಶಕ್ತಿ, ಪವನ ಶಕ್ತಿ ಮತ್ತಿತರ ನವೀಕರಿಸಬಹುದಾದ ಇಂಧನ ಮೂಲಗಳ ಸದ್ಬಳಕೆ ಮಾಡಬೇಕಿದೆ ಎಂದರು.
ಇಂಧನ ಸಂರಕ್ಷಣೆ ಮತ್ತು ಶಕ್ತಿಯ ಸಮರ್ಥ ಬಳಕೆಯ ಕಡೆಗೆ ಸಮಾಜದಲ್ಲಿ ನಿರಂತರವಾಗಿ ಬದಲಾವಣೆಯನ್ನು ತರಲು ಹಾಗೂ
ಇಂಧನ ದಕ್ಷತೆ ಮತ್ತು ಅದರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗಿದೆ ಎಂದರು.
ನವೀಕರಿಸಬಹುದಾದ ಇಂಧನ ಶಕ್ತಿಯ ಮಹತ್ವ ಹಾಗೂ ಸೌರಶಕ್ತಿ ಭವಿಷ್ಯದ ಶಕ್ತಿ ಕುರಿತು ಉಪನ್ಯಾಸ ನೀಡಿದ ಪೊನ್ನಂಪೇಟೆ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ( ಸಿ.ಐ.ಟಿ.) ಯ ಪ್ರಾಂಶುಪಾಲ ಡಾ ಎಂ. ಬಸವರಾಜ್, ಇಂದು ಪರಿಸರ ಸ್ನೇಹಿ ನವೀಕರಿಸಬಹುದಾದ ಇಂಧನಗಳ ಬಳಕೆಗೆ ಹೆಚ್ಚಿನ ಸಂಶೋಧನೆ ನಡೆದಿದ್ದು, ಮಾಲಿನ್ಯ ರಹಿತ ಶಕ್ತಿ ಮೂಲಗಳಾದ
ಸೌರಶಕ್ತಿ, ಪವನ ಶಕ್ತಿ, ಭೂ ಉಷ್ಣ ಶಕ್ತಿ, ಜೈವಿಕ ಶಕ್ತಿ ಹಾಗೂ ಎಥನಾಲ್ ನಂತಹ ಶಕ್ತಿ ಉತ್ಪಾದನೆ ಮಾಡುವ ಮೂಲಕ ದೇಶದಲ್ಲಿ ಇಂಧನ/ ಶಕ್ತಿ ಸದ್ಬಳಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಭಾರತ ದೇಶದಲ್ಲಿ ನವೀಕರಿಸಬಹುದಾದ ಇಂಧನ/ ಶಕ್ತಿ ಉತ್ಪಾದನೆಗೆ ವಿಪುಲ ಅವಕಾಶಗಳಿದ್ದು, ಇದರ ಸದ್ಬಳಕೆ ಮಾಡಿಕೊಂಡರೆ ಭಾರತ ದೇಶವು ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬನೆ ಹೊಂದಲು ಸಾಧ್ಯವಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷರೂ ಆದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ , ಪರಿಸರ ಸ್ನೇಹಿ ಇಂಧನ ಮೂಲಗಳಾದ
ನವೀಕರಿಸಬಹುದಾದ
ಸೌರಶಕ್ತಿ, (ಸೋಲಾರ್ ಎನರ್ಜಿ), ಪವನ ಶಕ್ತಿ, ಜೈವಿಕ ಇಂಧನ, ಭೂ ಶಕ್ತಿ ಬಳಕೆಗೆ ನಾವು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದರು.
“ಶಕ್ತಿ ಸಂರಕ್ಷಣೆ'” ಕುರಿತು ಉಪನ್ಯಾಸ ನೀಡಿದ ಮೈಸೂರು ವಿದ್ಯಾವರ್ಧಕ
ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕಿ ಬಿ.ಎಸ್.ಶಿಲ್ಪಾ ಮಾತನಾಡಿ,
ಭೂಮಿಯ ಮೇಲಿನ ಜಾಗತಿಕ ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮತ್ತು ಅದರ ವಿವಿಧ ರೀತಿಯ ಪರಿಣಾಮಗಳನ್ನು ವಾತಾವರಣದಲ್ಲಿ ಬಿಡುತ್ತಿದೆ.
ಈ ದಿಸೆಯಲ್ಲಿ ನಾವು ಹೊಸ ತಂತ್ರಜ್ಞಾನದಿಂದ ನವೀಕೃತ ಮಾದರಿಯಲ್ಲಿ ಕಟ್ಟಡಗಳನ್ನು ನಿರ್ಮಿಸುವ ಮೂಲಕ ನಾವು ಶಕ್ತಿ/ ಇಂಧನವನ್ನು ಉಳಿತಾಯ ಮಾಡಬೇಕಿದೆ ಎಂದರು.
ಭವಿಷ್ಯತ್ತಿನ ದೃಷ್ಟಿಯಿಂದ ನಾವು ಶಕ್ತಿ ಸಂರಕ್ಷಣೆ ಮಾಡುವ ಮೂಲಕ ಶಕ್ತಿ ಸಂರಕ್ಷಣೆಯಲ್ಲಿ ಸ್ವಾವಲಂಬನೆ ಹೊಂದಬೇಕಿದೆ ಎಂದರು.
ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರಾದ ಡಾ ಕೆ.ಬಿ.ಪರಶಿವಮೂರ್ತಿ, ಡಾ ಎಸ್.ರಂಗನಾಥ್, ಪ್ರೊ ಟಿ.ಪವಿತ್ರ,ಜಿಲ್ಲಾ ವಿಜ್ಞಾನ ಪರಿಷತ್ತಿನ
ಸಹ ಕಾರ್ಯದರ್ಶಿ ಜಿ.ಶ್ರೀಹರ್ಷ,
ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.
ಕಾಲೇಜಿನ ಅಧೀಕ್ಷಕರಾದ
ಎಚ್.ಎ.ರೂಪ ನಿರ್ವಹಿಸಿದರು.
ಸಹ ಪ್ರಾಧ್ಯಾಪಕಿ ರಾಧಿಕಾ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ ಎಂ.ಎಸ್. ಸುರೇಶ್ ವಂದಿಸಿದರು. ಸಹ ಪ್ರಾಧ್ಯಾಪಕಿ ಡಾ ಹೇಮಲತಾ
ಮತ್ತು ಗ್ರಂಥಪಾಲಕರಾದ ಡಾ ಸತ್ಯಶ್ರೀ ಅತಿಥಿ ಪರಿಚಯ ಮಾಡಿದರು.
ಕಾರ್ಯಾಗಾರದ ಅಂಗವಾಗಿ ವಿದ್ಯಾರ್ಥಿಗಳಿಗೆ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಕುರಿತು ವಸ್ತು ಪ್ರದರ್ಶನ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರಾದ ಡಾ ಕೆ.ಬಿ.ಪರಶಿವಮೂರ್ತಿ, ಡಾ ಎಸ್.ರಂಗನಾಥ್, ಪ್ರೊ ಟಿ.ಪವಿತ್ರ,ಜಿಲ್ಲಾ ವಿಜ್ಞಾನ ಪರಿಷತ್ತಿನ
ಸಹ ಕಾರ್ಯದರ್ಶಿ ಜಿ.ಶ್ರೀಹರ್ಷ,
ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.
ಕಾಲೇಜಿನ ಅಧೀಕ್ಷಕರಾದ
ಎಚ್.ಎ.ರೂಪ ನಿರ್ವಹಿಸಿದರು.
ಸಹ ಪ್ರಾಧ್ಯಾಪಕಿ ರಾಧಿಕಾ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ ಎಂ.ಎಸ್. ಸುರೇಶ್ ವಂದಿಸಿದರು. ಸಹ ಪ್ರಾಧ್ಯಾಪಕಿ ಡಾ ಹೇಮಲತಾ
ಮತ್ತು ಗ್ರಂಥಪಾಲಕರಾದ ಡಾ ಸತ್ಯಶ್ರೀ ಅತಿಥಿ ಪರಿಚಯ ಮಾಡಿದರು.
ಕಾರ್ಯಕ್ರಮದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳ ಸಂರಕ್ಷಣೆ ಕುರಿತು ಭಿತ್ತಿಪತ್ರಗಳನ್ನು ಹಿಡಿದು ಜಾಗೃತಿ ಮೂಡಿಸಲಾಯಿತು.
ಕಾರ್ಯಾಗಾರದ ಅಂಗವಾಗಿ ವಿದ್ಯಾರ್ಥಿಗಳಿಗೆ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಕುರಿತು ವಸ್ತು ಪ್ರದರ್ಶನ ಹಾಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.
—————————–