ಕಾರ್ಯಕ್ರಮ

ಅಂಚೆ ಇಲಾಖೆ ವಿನೂತನ ಸೇವೆ ಕೊಡಗು ವಿಶ್ವವಿದ್ಯಾಲಯ ಪ್ರಥಮ ಯತ್ನ

ಪ್ರಾಜೆಕ್ಟ್ ಕಾವೇರಿ: ಅಂಚೆ ಕಚೇರಿ ಮೂಲಕ ಅಂಕಪಟ್ಟಿ ರವಾನೆ

ಕುಶಾಲನಗರ, ಡಿ 13: ಕೊಡಗು ವಿಶ್ವವಿದ್ಯಾಲಯದ ಅಧೀನಕ್ಕೊಳಪಡುವ ಘಟಕ ಮಹಾವಿದ್ಯಾಲಯ ಮತ್ತು ಸಂಯೋಜಿತ ಮಹಾವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೊಡಗು ಅಂಚೆ ಇಲಾಖೆಯು ಜಿಲ್ಲೆಯಲ್ಲಿ ವಿನೂತನ ಸೇವೆಯೊಂದನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಕೊಡಗು ವಿಶ್ವವಿದ್ಯಾಲಯದ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ವಿನೂತನ ಸೇವೆಗೆ ‘ಪ್ರಾಜೆಕ್ಟ್ ಕಾವೇರಿ’ ಎಂಬ ಹೆಸರನ್ನಿಡಲಾಗಿದೆ.

ನೂತನ ಕೊಡಗು ವಿಶ್ವವಿದ್ಯಾಲಯವು ೨೦೨೩ ಮಾರ್ಚ್ ತಿಂಗಳ ೨೮ನೇ ತಾರೀಖಿನಂದು ಸ್ಥಾಪನೆಗೊಂಡು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ತನ್ನ ಅಧಿ ನಿಯಮ ೧೯೫೬ ರ ಪ್ರಕರಣ ೨ (ಎಫ್) ಅಡಿಯಲ್ಲಿ ಮಾನ್ಯತೆ ಪಡೆದುಕೊಂಡಿದೆ. ಯುಜಿಸಿ ಅಡಿಯಲ್ಲಿ ಬರುವ ವಿವಿಧ ಪದವಿಗಳನ್ನು ನೀಡಲು ಅಧಿಕೃತ ಮಾನ್ಯತೆ ಪಡೆದ ಕೊಡಗು ವಿಶ್ವವಿದ್ಯಾಲಯವು ಈಗಾಗಲೇ ತನ್ನ ಶೈಕ್ಷಣಿಕ ಕಾರ್ಯಚಟುವಟಿಕೆಯನ್ನು ಪ್ರಾರಂಭಿಸಿದೆ. ಕರ್ನಾಟಕದ ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆ ಮತ್ತು ಕರ್ನಾಟಕ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲಾಭಿವೃದ್ಧಿ ನಿಗಮ, ಬೆಂಗಳೂರಿನ ಫೋರ್ಕ್ ಟೆಕ್ನಾಲಜಿಸ್ ಸಹಯೋಗದೊಂದಿಗೆ ಕೊಡಗು ವಿಶ್ವವಿದ್ಯಾಲಯದ ಅಧ್ಯಾಪಕರುಗಳಿಗೆ ಕೌಶಲಾಭಿವೃದ್ಧಿ ಕಾರ್ಯಗಾರಗಳನ್ನು ಆಯೋಜಿಸಿದೆ. ಅಷ್ಟೇ ಅಲ್ಲದೇ ಧಾರವಾಡದ ಬಹು ಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರ, ಭಾರತ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಹೈದರಾಬಾದಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆ, ಹೀಗೆ ಇನ್ನೂ ಕೆಲವು ರಾಜ್ಯ ಮತ್ತು ರಾಷ್ಟ್ರೀಯ ಸಂಸ್ಥೆಗಳೊಂದಿಗೆ ಒಡಂಬಡಿಕೆಗಳನ್ನು ಸಹ ಮಾಡಿಕೊಂಡಿದೆ.

ಇದರ ನಡುವೆ ಕರ್ನಾಟಕದಲ್ಲೇ ಪ್ರಥಮ ಪ್ರಯತ್ನವೆಂಬಂತೆ ಕೊಡಗು ವಿಶ್ವವಿದ್ಯಾಲಯದ ಅಧೀನಕ್ಕೊಳಪಡುವ ಘಟಕ ಮಹಾವಿದ್ಯಾಲಯ ಮತ್ತು ಸಂಯೋಜಿತ ಮಹಾವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಅಂಕಪಟ್ಟಿಗಳು ಸೇರಿದಂತೆ ಇತರೆ ಶೈಕ್ಷಣಿಕ ದಾಖಲೆಗಳನ್ನು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸುವಂತಹ ಯೋಜನೆ ಹೊಂದಿದೆ. ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳಿಗೆ ಹೋಲಿಸಿದರೆ ಪ್ರಥಮ ಪ್ರಯತ್ನವಾಗಿದೆ ಎಂಬುದು ಮತ್ತೊಂದು ವಿಶೇಷವಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಡಿಪ್ಲೊಮಾ ಪದವಿಗಳಿಗೆ ಸಂಬಂಧಿಸಿದಂತೆ ಮಾತ್ರ ‘ಪ್ರಾಜೆಕ್ಟ್ ಮಂಗಳ’ ಎಂಬ ಹೆಸರಿನಲ್ಲಿ ಈ ಸೇವೆ ಸದ್ಯದ ಮಟ್ಟಿಗೆ ಇತ್ತು. ಇದೀಗ ನೂತನ ಕೊಡಗು ವಿಶ್ವವಿದ್ಯಾಲಯವು ‘ಪ್ರಾಜೆಕ್ಟ್ ಕಾವೇರಿ’ ಎಂಬ ಹೆಸರಿನಲ್ಲಿ ಅಂಚೆ ಕಛೇರಿ ಸೇವೆಯನ್ನು ಆರಂಭಿಸಿದೆ.

ಪದವಿಗಳನ್ನು ಮುಗಿಸಿದ ಕೆಲವು ತಿಂಗಳ ತದನಂತರದಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ ಕಾಲೇಜುಗಳಿಗೆ ಅಂಕಪಟ್ಟಿಗಳು ಮುದ್ರಣಗೊಂಡು ಸಾಧಾರಣವಾಗಿ ರವಾನಿಸಲ್ಪಡುತ್ತದೆ. ಅಂತಹ ಸಂದರ್ಭಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಉದ್ಯೋಗಕ್ಕೆ ರಜೆ ಹಾಕಿ ಅಂಕಪಟ್ಟಿಗಳನ್ನು ಪಡೆದುಕೊಳ್ಳಲು ತಮ್ಮ ಕಾಲೇಜುಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದನ್ನೆಲ್ಲಾ ಮನಗಂಡು ಅಂಚೆ ಇಲಾಖೆಯ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸುವ ಪ್ರಯತ್ನ ಇದಾಗಿದೆ. ಮೂಲತಃ ಚಿಕ್ಕ ಅಳುವಾರದಲ್ಲಿರುವ ಕೊಡಗು ವಿಶ್ವವಿದ್ಯಾಲಯವು ‘ಜ್ಞಾನಕಾವೇರಿ’ ಎಂಬ ಹೆಸರನ್ನು ಹೊಂದಿರುವ ಕಾರಣದಿಂದಾಗಿ ಈ ವಿನೂತನ ಯೋಜನೆಗೆ ‘ಪ್ರಾಜೆಕ್ಟ್ ಕಾವೇರಿ’ ಎಂಬ ಹೆಸರನ್ನಿಡಲಾಗಿದೆ.

ಕೊಡಗು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗಷ್ಟೆ ಎರಡೂ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಚಾಲನೆ ನೀಡಲಾಯಿತು. ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂ. ಆಲೂರ ಅವರ ಅನುಮೋದನೆಯೊಂದಿಗೆ ಒಡಂಬಡಿಕೆಯ ಪತ್ರವನ್ನು ಕೊಡಗು ಅಂಚೆ ವಿಭಾಗದ ಅಧೀಕ್ಷಕರಾದ ಎಸ್.ಪಿ. ರವಿ ಅವರು ಕೊಡಗು ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಸೀನಪ್ಪ ಅವರಿಗೆ ಹಸ್ತಾಂತರಿಸಿದರು.

ಈ ಸೇವೆಯಿಂದಾಗಿ ದೂರದ ಸ್ಥಳಗಳಿಂದ ವಿದ್ಯಾಭ್ಯಾಸದ ಸಲುವಾಗಿ ದಾಖಲಾಗುವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅಂಚೆ ಮೂಲಕ ಈ ಸೇವೆಗೆ ಅರ್ಜಿಯಲ್ಲಿ ನಮೂದಿಸಿದ್ದರೆ ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಸ್ಪೀಡ್‌ಪೋಸ್ಟ್ ಮೂಲಕ ತ್ವರಿತವಾಗಿ ತಲುಪಿಸಲಾಗುವುದು ಎಂದು ಕೊಡಗು ಅಂಚೆ ವಿಭಾಗದ ಅಧೀಕ್ಷಕರಾದ ಎಸ್.ಪಿ. ರವಿ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!