ಕಾರ್ಯಕ್ರಮ

ಕುಶಾಲನಗರ-ಹಾರಂಗಿ‌ ಬಸ್ ರೂಟ್ ಗೆ ಶಾಸಕ‌ ಮಂಥರ್ ಗೌಡ ಚಾಲನೆ

ಮಾಜಿ ಶಾಸಕದ್ವಯರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಮಂಥರ್ ಗೌಡ

ಕುಶಾಲನಗರ, ನ 22: ಕುಶಾಲನಗರ-ಹಾರಂಗಿ ರಸ್ತೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಬೇಡಿಕೆ ಹಿನ್ನಲೆಯಲ್ಲಿ ಬೆಳಗ್ಗೆ ತರಗತಿಗಳಿಗೆ ತೆರಳಲು ಅನುಕೂಲವಾಗುವಂತೆ ಸಾರಿಗೆ ಬಸ್ ಸಂಚಾರಕ್ಕೆ ಶಾಸಕ ಡಾ.ಮಂಥರ್ ಗೌಡ ಚಾಲನೆ ನೀಡಿದರು.
ಬೆಳಗಿನ ವೇಳೆ ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಲು ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ವಿದ್ಯಾರ್ಥಿಗಳು ಸಲ್ಲಿಸಿದ ಬೇಡಿಕೆಗೆ ಸ್ಪಂದಿಸಿ 9.30 ಕ್ಕೆ ಸಾರಿಗೆ ಬಸ್ ನಿಲ್ದಾಣದಿಂದ ಕಾಲೇಜು‌ ಮಾರ್ಗವಾಗಿ ಹಾರಂಗಿಗೆ ಬಸ್ ಸಂಚಾರಕ್ಕೆ ಶಾಸಕ ಮಂಥರ್ ಗೌಡ ಬಸ್ ಗೆ ಪೂಜೆ‌ ಸಲ್ಲಿಸಿ ಚಾಲನೆ‌ ನೀಡಿದರು.
ನಂತರ ಮಾತನಾಡಿದ ಅವರು, ಜನಸ್ಪಂದನಾ ಕಾರ್ಯಕ್ರಮಗಳ‌ ಮೂಲಕ ಜನರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸಲಾಗುವುದು. ಜಿಲ್ಲೆಯಲ್ಲಿ ಸಾರಿಗೆ ಸಿಬ್ಬಂದಿಗಳ ಕೊರತೆ ನೀಗಿಸಲು ಸಾರಿಗೆ ಸಚಿವರ ಗಮನ ಸೆಳೆಯಲಾಗುವುದು.‌ಕುಶಾಲನಗರದಲ್ಲಿ ಸಾರಿಗೆ ಡಿಪೋ ನಿರ್ಮಾಣ‌ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಡಿಪೋ ನಿರ್ಮಾಣಗೊಂಡಲ್ಲಿ ಸಾರಿಗೆ ಬಸ್ ರೂಟ್ ಗಳ ಕೊರತೆ ನಿವಾರಣೆಯಾಗಲಿದೆ ಎಂದರು.
ಬಸ್ ರೂಟ್ ಒದಗಿಸಿದ ಶಾಸಕರಿಗೆ ಧನ್ಯವಾದ ಸಲ್ಲಿಸಿದ ಕಾಲೇಜು ಪ್ರಾಂಶುಪಾಲ ಬಿ.ಎಂ.ಪ್ರವೀಣ್ ಕುಮಾರ್, ಕಾಲೇಜು ಬಿಡುವ ವೇಳೆಯೂ ಬಸ್ ರೂಟ್ ಒದಗಿಸಿದಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದು‌ ಆಗ್ರಹಿಸಿದರು.
ಈ ಸಂದರ್ಭ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಘಟಕ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಪುರಸಭೆ ಸದಸ್ಯ ಎಂ.ಕೆ.ದಿನೇಶ್, ಬ್ಲಾಕ್ ಕಾರ್ಮಿಕ ಘಟಕ ಅಧ್ಯಕ್ಷ ಎಚ್.ಕೆ.ಶಿವಶಂಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್, ಪ್ರಮುಖರಾದ ಜೋಸೆಫ್ ವಿಕ್ಟರ್ ಸೋನ್ಸ್, ರಂಜನ್, ರೋಷನ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ವಿದ್ಯಾರ್ಥಿಗಳು ಇದ್ದರು.
ಇದೇ ಸಂದರ್ಭ ಮಾಜಿ ಶಾಸಕದ್ವಯರ‌ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಮಂಥರ್ ಗೌಡ, ಜನರ ಅಗತ್ಯಗಳಿಗೆ ತಕ್ಕಂತಹ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಕಾನೂನಾತ್ಮಕವಾಗಿಯೇ ಎಲ್ಲವನ್ನು ನಡೆಸಲಾಗುತ್ತಿದೆ. ಟೀಕೆಗಳ ಬದಲಾಗಿ ಹಿರಿಯರು ಮಾರ್ಗದರ್ಶನ‌ ಮಾಡಬೇಕಿದೆ. ಅವರ ಅವಧಿಯಲ್ಲಿಯೇ ಮಾಡಬಹುದಾಗಿದ್ದಂತಹ ಕೆಲಸಗಳು‌ ನನ್ನ ಅವಧಿಯಲ್ಲಿ ಕೈಗೊಳ್ಳುತ್ತಿರುವ ಹತಾಶೆ ಅವರನ್ನು ಕಾಡುತ್ತಿರಬಹುದು ಎಂದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!