ಸಭೆ

ನಂಜರಾಯಪಟ್ಟಣ ಗ್ರಾಪಂ: 2023-24ನೇ ಸಾಲಿನ ಮೊದಲನೇ ಅವಧಿಯ ಗ್ರಾಮಸಭೆ

ಕುಶಾಲನಗರ, ನ 21: ನಂಜರಾಯಪಟ್ಟಣ ಗ್ರಾಮಪಂಚಾಯ್ತಿಯ 2023-24ನೇ ಸಾಲಿನ ಮೊದಲನೇ ಅವಧಿಯ ಗ್ರಾಮಸಭೆ ಹೊಸಪಟ್ಟಣದ ಸಮುದಾಯ ಭವನದಲ್ಲಿ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಆರಂಭದಲ್ಲಿ ಹಿಂದಿನ ಗ್ರಾಮಸಭೆಯ ನಡಾವಳಿ ಓದಿ ಅಂಗೀಕರಿಸಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ಕಾಡಾನೆಗಳ ಹಾವಳಿ ನಿಯಂತ್ರಣ ಸಂಬಂಧ ರೈಲ್ವೇ ಬ್ಯಾರಿಕೆಡ್ ಅಳವಡಿಕೆ ಕಾಮಗಾರಿ ಅವೈಜ್ಞಾನಿಕ ಎಂದು ಸರಕಾರದ ಗಮನ‌ ಸೆಳೆಯಲಾಗಿದೆ. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ವಿಶೇಷ ಗ್ರಾಮಸಭೆಯಲ್ಲಿ ಕೂಡ ಈ ಬಗ್ಗೆ ಚರ್ಚಿಸಲಾಗಿದೆ. ಗ್ರಾಮದಲ್ಲಿ ಎರಡು ಸ್ಮಶಾನ ಒದಗಿಸಲಾಗಿದೆ. ನಂಜರಾಯಪಟ್ಟಣವನ್ನು ಹೋಬಳಿ‌ ಕೇಂದ್ರವಾಗಿಸುವ ನಿಟ್ಟಿನಲ್ಲಿ ಹಿಂದಿನ ಸರಕಾರದ ಅವಧಿಯಲ್ಲೇ ಕಂದಾಯ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು. ದುಬಾರೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ತೂಗು ಸೇತುವೆ ನಿರ್ಮಾಣಕ್ಕೆ ಹಲವು‌ ಬಾರಿ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಸಚಿವಾಲಯ, ಇಲಾಖೆಗೆ ಮನವಿ ಸಲ್ಲಿಸಿದರೂ ಇದುವರೆಗೆ ಯಾವುದೇ ಪ್ರಯೋಜನ ಉಂಟಾಗಿಲ್ಲ ಎಂದರು. ಸಾರ್ವಜನಿಕರ ಬೇಡಿಕೆ, ಕೋರಿಕೆಯಂತೆ ಪಶು ವೈದ್ಯರ ನೇಮಕ, ಪಟ್ಟೆ ವಿತರಣೆಗೆ ಕ್ರಮಕ್ಕೆ ಪಂಚಾಯತ್ ಮೂಲಕ ಬೇಕಾದ ಎಲ್ಲಾ ಕ್ರಮಕೈಗೊಳ್ಳಲಾಗುತ್ತಿದೆ ಎಂದರು. ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖಾ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಮಾಹಿತಿಯನ್ನು ಸಭೆಗೆ ಒದಗಿಸಿದರು. ಸ್ವಚ್ಚತೆ, ಕಾಡಾನೆ ಹಾವಳಿ, ಸೋಲಾರ್ ಫೆನ್ಸಿಂಗ್ ದುರಸ್ಥಿ, ಚಿಕ್ಲಿಹೊಳೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಸೃಷ್ಠಿಗೆ ಅವಕಾಶ ಕಲ್ಪಿಸಲು, ಸ್ಮಶಾನದ ಪರ-ವಿರೋಧ, ಪಡಿತರ ಚೀಟಿ ಸಮಸ್ಯೆಗಳ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯಿತು. ನಂಜರಾಯಪಟ್ಟಣವನ್ನು‌ ಹೋಬಳಿ‌ ಕೇಂದ್ರವಾಗಿಸುವಂತೆ ಹಾಗೂ ಗ್ರಾಪಂ ಗೆ ಆದಾಯ ಸೃಷ್ಠಿ ಹಿನ್ನಲೆಯಲ್ಲಿ ಚಿಕ್ಲಿಹೊಳೆಯಲ್ಲಿ‌ ಪಾರ್ಕಿಂಗ್ ವ್ಯವಸ್ಥೆ ಗ್ರಾಪಂ ಗೆ ವಹಿಸುವಂತೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಗ್ರಾಪಂ ಸದಸ್ಯ ಆರ್.ಕೆ.ಚಂದ್ರ ಮಾತನಾಡಿ, ಚಿಕ್ಲಿಹೊಳೆ ಜಾಗಕ್ಕೆ ಸಂಬಂಧಿಸಿದಂತೆ ಜಾಗದ ಗೊಂದಲ‌ ನಿವಾರಣೆಗೆ ನೀರಾವರಿ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕಿದೆ. ಅಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಿ ರೈತರಿಗೆ ಅನುಕೂಲವಾಗುವಂತೆ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ ಎಂದರು. ಇದೇ ಸಂದರ್ಭ ರಂಗಸಮುದ್ರ ಸ.ಹಿ.ಪ್ರಾ. ಶಾಲೆಯಲ್ಲಿ ಸಹ ಶಿಕ್ಷಕಿಯಾಗಿರುವ ಸಾಹಿತಿ, ಲೇಖಕಿ ಕೆ.ಕೆ.ಸುನಿತಾ ಹಾಗೂ ನಂಜರಾಯಪಟ್ಟಣ ಪ್ರೌಢಶಾಲೆಯಲ್ಲಿ‌ 2022-23ನೇ ಸಾಲಿನಲ್ಲಿ ಶೇ. 100 ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ‌ ಪ್ರಸಾದ್ ಅವರನ್ನು ಗ್ರಾಪಂ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಸತಿ ಯೋಜನೆಗೆ ಹಾಗೂ ಅಭಿವೃದ್ಧಿ ಮತ್ತು ವೈಯಕ್ತಿಕ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅರ್ಜಿ ಸ್ವೀಕಾರ ಮಾಡಲಾಯಿತು. ಸಮಾಜ ಕಲ್ಯಾಣ ಇಲಾಖೆ ತಾಲೂಕು ಸಹಾಯಕ‌ ನಿರ್ದೇಶಕ ಸಿದ್ದೇಗೌಡ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಗ್ರಾಪಂ ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಆರ್.ಕೆ.ಚಂದ್ರ, ಮಾವಾಜಿ ರಕ್ಷಿತ್, ಜಾಜಿ, ಕುಸುಮಾವತಿ, ಪಿಡಿಒ ರಾಜಶೇಖರ್, ಕಾರ್ಯದರ್ಶಿ ಶೇಷಗಿರಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!