ಕುಶಾಲನಗರ, ನ 21: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ಕೃಷಿಕರು ಬೆಳೆದ ಭತ್ತದ ಫಸಲು ಸಂಪೂರ್ಣವಾಗಿ ಕಾಡಾನೆಗಳ ಪಾಲಾಗುತ್ತಿದೆ ಎಂದು ಗ್ರಾಮ ನಿವಾಸಿ ಚೆಂಗಚಂಡ ಗಣೇಶ್ ಕಾರ್ಯಪ್ಪ ದೂರಿದ್ದಾರೆ.
ಆನೆಕಾಡು ಅರಣ್ಯದ ಅಂಚಿನಲ್ಲಿರುವ ಗ್ರಾಮದಲ್ಲಿ ಅರಣ್ಯದಿಂದ ಧಾವಿಸುವ ಕಾಡಾನೆಗಳ ಹಿಂಡು ತಂಡೋಪತಂಡವಾಗಿ ಬಂದು ಬೆಳೆಯನ್ನೆಲ್ಲಾ ತುಳಿದು ತಿಂದು ಹಾನಿ ಮಾಡುತ್ತಿವೆ. ಅರಣ್ಯ ಇಲಾಖೆಗೆ ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದರೂ ಕೂಡ ಇಲಾಖೆಯಿಂದ ಬಿಡಿಗಾಸು ಪರಿಹಾರದ ಹಣ ಬರುತ್ತಿಲ್ಲ.
ಅರಣ್ಯದ ಸುತ್ತಾ ಕಾಡಾನೆಗಳು ಧಾವಿಸದಂತೆ ಸೋಲಾರ್ ತಂತಿ ಬೇಲಿ ಅಥವಾ ರೈಲು ಕಂಬಿಯ ಬೇಲಿಯನ್ನೂ ಅಳವಡಿಸುತ್ತಿಲ್ಲ ಎಂದು ದೂರಿರುವ ಸ್ಥಳೀಯರು, ನಾವು ಬೆಳೆದ ಕಾಫಿ, ಬಾಳೆ, ಅಡಕೆ, ತೆಂಗು ಹಾಗೂ ಭತ್ತದ ಫಸಲು ಕಾಡಾನೆಗಳ ಪಾಲಾಗುತ್ತಿದೆ ಎಂದು ಗಣೇಶ್ ದೂರಿದ್ದಾರೆ.
ಕಾಡಂಚಿನ ಚಿಕ್ಕಬೆಟ್ಟಗೇರಿ ಗ್ರಾಮಕ್ಕೆ ಅರಣ್ಯಾಧಿಕಾರಿಗಳು ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜಂಟಿಯಾಗಿ ನಷ್ಟದ ವಿವರ ಕೈಗೊಳ್ಳಬೇಕು. ಹಾಗೂ ರೈತರಿಗೆ ಪ್ರತೀ ವರ್ಷವೂ ಆಗುತ್ತಿರುವ ಬೆಳೆ ಹಾನಿಯ ಪರಿಹಾರದ ಹಣವನ್ನು ನೀಡಬೇಕೆಂದು ಕಾರ್ಯಪ್ಪ ಒತ್ತಾಯಿಸಿದ್ದಾರೆ.
Back to top button
error: Content is protected !!