ಕಾರ್ಯಕ್ರಮ

ಹೆಬ್ಬಾಲೆಯ ಶ್ರೀ ಬಸವೇಶ್ವರ ದೇವಾಲಯ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನಾ ಕಾರ್ಯಕ್ರಮ

ಕುಶಾಲನಗರ ನ 16 : ಹೆಬ್ಬಾಲೆಯ ಶ್ರೀ ಬಸವೇಶ್ವರ ದೇವಾಲಯ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನಾ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ನೆರವೇರಿತು.
ಕಳಶರೋಹಣ, ಮಹಾರುದ್ರಾಭಿಷೇಕ, ಗೋಪುರ ಕಳಶ ಪ್ರತಿಷ್ಠಾಪನೆ, ಕುಂಭಾಭಿಷೇಕ
ಧಾರ್ಮಿಕ ಪೂಜಾ ವಿಧಿವಿಧಾನ, ಹೋಮ ಹವನಗಳು ನೆರವೇರಿದವು.

ಮಹೋತ್ಸವದ ಅಂಗವಾಗಿ ದೇವಾಲಯ ಆವರಣದಲ್ಲಿ
ವಿರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಅರೆಮಾದನಹಳ್ಳಿಯ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು,‌ ನಶ್ವರವಾದ ಈ ಜೀವನದಲ್ಲಿ‌ ಆಸ್ತಿ, ಅಂತಸ್ತು, ಆಯಸ್ಸು ಶಾಶ್ವತವಲ್ಲ. ಇರುವ ಅತ್ಯಲ್ಪ ಆಯಸ್ಸಿನಲ್ಲಿ ಧರ್ಮ ಸಂಪಾದನೆ ಮುಕ್ತಿಗೆ‌ ಮಾರ್ಗ ಕಲ್ಪಿಸಲಿದೆ. ಸನ್ನಡತೆ, ಸದ್ವಿಚಾರ, ಸಾರ್ಥಕ ಸೇವೆಗಳ ಮೂಲಕ ಭಗವಂತನ ಅನುಗ್ರಹ ಪಡೆದುಕೊಳ್ಳಲು ಸಾಧ್ಯ ಎಂದರು.

ಅರಮೇರಿ‌ ಮಠಾಧೀಶರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ,
ಪ್ರತಿಯೊಬ್ಬ ಮನುಷ್ಯನ ಅಂತರಂಗದಲ್ಲಿ ಆಸ್ತಿಕ ಭಾವನೆ ಕಾಣಲು ಸಾಧ್ಯ. ಆಧ್ಯಾತ್ಮಿಕ ಪರಂಪರೆಯ ಶಕ್ತಿಯೇ ಅಂತಹದ್ದು. ವಿಜ್ಞಾನ, ತಂತ್ರಜ್ಞಾನ ಬೆಳವಣಿಗೆ ಮನುಷ್ಯನ ಬಾಹ್ಯ ಬದಲಾವಣೆಗೆ ಪೂರಕವಾದರೆ ಅಂತರಂಗದ ಪರಿಷ್ಕರಣೆಗೆ, ಶಾಂತಿ, ನೆಮ್ಮದಿ, ಸೌರ್ಹದತೆಗೆ ಆಧ್ಯಾತ್ಮ ಅಗತ್ಯವಿದೆ ಎಂದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ‌ ಮಾತನಾಡಿ, ಭಾರತ ಒಂದು ದೇಗುಲವಿದ್ದಂತೆ. ಧರ್ಮದ ತಳಹದಿ‌ ಮೇಲೆ ಜೀವಿಸುತ್ತಿರುವ ಇಲ್ಲಿನ ನಿವಾಸಿಗಳು ಗಾಳಿ, ನೀರು, ಪ್ರಕೃತಿಯನ್ನು ದೇವರಂತೆ ಆಧರಿಸುತ್ತಾರೆ. ಜಗತ್ತಿನಲ್ಲಿ‌ ಒಂದೇ ಧರ್ಮವನ್ನು ಅನುಸರಿಸುತ್ತಿರುವ ಹಲವು ದೇಶಗಳು ಸಂಘರ್ಷವನ್ನು ಎದುರಿಸುತ್ತಿದೆ. ಭಾರತೀಯರು ವಿವಿಧ ಧರ್ಮ, ಭಾಷೆ, ದೇವರನ್ನು ಅನುಸರಿಸುತ್ತಿದ್ದರೂ ಎಲ್ಲರೂ ಶಾಂತಿ, ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ ಎಂದರು.

ಬಸವೇಶ್ವರ ಜೀರ್ಣೋದ್ಧಾರ ಮತ್ತು ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಎಚ್.ಎನ್.ಬಸವರಾಜ್ ಸೇರಿದಂತೆ ದೇವಾಲಯ ಜೀರ್ಣೋದ್ಧಾರಕ್ಕೆ ಸಹಕರಿಸಿ, ಸಲಹೆ ನೀಡಿ ಕೊಡುಗೆ ನೀಡಿದ‌ ಪ್ರಮುಖ ದಾನಿಗಳನ್ನು, ಪೂಜಾ ವಿಧಿ ನೆರವೇರಿಸಿದ ಶಾಸ್ತ್ರಿಗಳ ತಂಡವನ್ನು ಸ್ವಾಮೀಜಿಗಳು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ, ವಿರಾಜಪೇಟೆ ಶ್ರೀ ಆತ್ಮಾನಂದಪುರಿ ಸ್ವಾಮೀಜಿ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಹೆಬ್ಬಾಲೆ ಗ್ರಾಪಂ ಅಧ್ಯಕ್ಷೆ ಅರುಣ ಕುಮಾರಿ, ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಗುಂಡುರಾವ್, ಜೋಸೆಫ್ ವಿಕ್ಟರ್ ಸೋನ್ಸ್, ನಟೇಶ್ ಗೌಡ, ಶ್ರೀನಿವಾಸ್, ರಾಜಶೇಖರ್, ಸಮಿತಿ ಕಾರ್ಯದರ್ಶಿ ಎಚ್.ವಿ.ರಾಜು, ಖಜಾಂಚಿ ಎಚ್.ಟಿ.ನಾರಾಯಣ ಸೇರಿದಂತೆ ಸಮಿತಿ ಪ್ರಮುಖರು, ಗ್ರಾಮದ ಮುಖಂಡರು ಇದ್ದರು.

ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಪೂಜೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!