ಕಾರ್ಯಕ್ರಮ

ಸಮ ಸಮಾಜದ ಪರಿಕಲ್ಪನೆ ಹನ್ನೆರಡನೇ ಶತಮಾನದ ಹೋರಾಟ ಇಂದಿಗೂ ಮುಂದುವರೆದಿರುವುದು ವಿಷಾದ

ವಚನ ಸಾಹಿತ್ಯ ಗೋಷ್ಠಿಯಲ್ಲಿ ಡಾ.ಸುನಿಲ್ ಕುಮಾರ್ ವಿಷಾದ

ಕುಶಾಲನಗರ, ನ 06 : ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ನಡೆಸಿದ ಹೋರಾಟ 800 ವರ್ಷಗಳು ಕಳೆದರೂ ಇಂದಿಗೂ ಕೂಡ ನಡೆಯುತ್ತಲೇ ಇದ್ದರೂ ಕೂಡ ಸಮ ಸಮಾಜ ಸಾಧ್ಯವಾಗುತ್ತಿಲ್ಲ ಎಂದು ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಸುನಿಲ್ ಕುಮಾರ್ ವಿಷಾದಿಸಿದರು.
ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಸ್ಥಳೀಯ ಕನ್ನಡ ಭಾರತಿ ಪಿಯು ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ” ವಚನಗಳ ನಡಿಗೆ – ವಿದ್ಯಾರ್ಥಿಗಳ ಕಡೆಗೆ ” ಚಿಂತನಾ ಗೋಷ್ಠಿಯಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ ಅವರು, ಶತ ಶತಮಾನಗಳಿಂದ ಅದೆಷ್ಟೋ ಆಡಳಿತಗಳು, ಸರ್ಕಾರಗಳು ಬಂದು ಹೋದರೂ ಕೂಡ ಜಾತಿ, ಧರ್ಮ, ವರ್ಣ, ಬೇಧಗಳ ತಾರತಮ್ಯ ದೂರವಾಗಿಲ್ಲ. ವಿದ್ಯಾವಂತರಿಂದಲೇ ಸಮಾಜದಲ್ಲಿಂದು ಹೆಚ್ಚಿನ ಕೆಡುಕುಗಳು ಉಂಟಾಗುತ್ತಿವೆ ಹೊರತು ಅವಿದ್ಯಾವಂತರಿಂದಲ್ಲ.
ದಯೆಯೇ ಧರ್ಮದ ಮೂಲ ಎಂದು ಬಸವಣ್ಣನವರು ಸಾರಿ ಹೋಗಿದ್ದಾರೆ. ಆದರೆ ಯುದ್ಧಗಳ ಹೆಸರಲ್ಲಿ ಮಕ್ಕಳಾದಿಯಾಗಿ ಜನರನ್ನು ಸಿಡಿಮದ್ದು ಗುಂಡುಗಳ ಸಿಡಿಸಿ ಅಮಾನುಷವಾಗಿ ಕೊಲ್ಲಲಾಗುತ್ತಿದೆ.
ಒಳಿತು ಕೆಡುಕುಗಳ ಅವಲೋಕನ ಮಾಡುವಲ್ಲಿ ಇಂದು ನಾವು ಸೋತಿದ್ದೇವೆ.
ಬುದ್ಧ – ಬಸವ, ಅಂಬೇಡ್ಕರ್, ಮಹಮದ್ ಪೈಗಂಬರ್, ಅಬ್ದುಲ್ ಕಲಾಂ, ಕನಕದಾಸ ಮೊದಲಾದ ಶ್ರೇಷ್ಟ ಸಾಧಕರ ಆದರ್ಶಗಳು ಹಾಗೂ ಅವರ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳು ತಿಳಿಯಬೇಕಿದೆ.
ಹನ್ನೆರಡೇ ಶತಮಾನದಲ್ಲಿ ಅಕ್ಕಮಹಾದೇವಿ ಸಮಾಜದ ಒಳಿತಿಗೆ ಕೌಶಿಕ ಮಹಾರಾಜನನ್ನೇ ತಿರಸ್ಕರಿಸಿ ಅನುಭವ ಮಂಟಪಕ್ಕೆ ಬಂದಳು. ಆದರೆ ಇಂದು ರಾತ್ರಿ ಏಕಾಂಗಿಯಾಗಿ ಮಹಿಳೆ ಅಥವಾ ಯುವತಿ ರಸ್ತೆಯಲ್ಲಿ ಓಡಾಡದಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಡಾ.ಸುನಿಲ್ ಕುಮಾರ್, ಮಾನವ ಜನ್ಮ ಸಾರ್ಥಕಗೊಳಿಸಲು ಮೊದಲು ಮನಸ್ಸನ್ನು ಶುದ್ಧಗೊಳಿಸಿಕೊಳ್ಳಬೇಕಿದೆ.
ಸಕಲ ಜೀವಿಗಳಲ್ಲಿ ದಯೆ, ಪ್ರೀತಿ ಸಾಮರಸ್ಯ ಒಡಮೂಡಬೇಕಿದೆ. ಇದೇ ವಚನಸಾಹಿತ್ಯದ ಶ್ರೇಷ್ಠ ಮೌಲ್ಯ ಎಂದು ಅವರು ಹೇಳಿದರು.
ಕೊಡಗು ವಿಶ್ವ ವಿದ್ಯಾಲಯದ ಮೈಕ್ರೋ ಬಯಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ಐ.ಕೆ.ಮಂಜುಳಾ ಚಿಂತನಾ ಗೋಷ್ಢಿಯನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪಠ್ಯದ ಜೊತೆಗೆ ವಚನ ಸಾಹಿತ್ಯದ ಅರಿವು ಬೆಳೆದಲ್ಲಿ ಅವರ ಬದುಕು ಶ್ರೇಷ್ಠವಾಗುತ್ತದೆ. ಆಧುನಿಕ ಜೀವನ ಶೈಲಿ ವಿದ್ಯಾರ್ಥಿಗಳಿಗೆ ಮಾರಕವಾಗಿರವುದರಿಂದ ಸಾಹಿತಿಗಳು, ಚಿಂತಕರು ಸಾಧಕರ ಜೀವನ ಚರಿತ್ರೆಗಳನ್ನು ಓದುವ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಡಾ.ಮಂಜುಳಾ ಕರೆಕೊಟ್ಟರು.
ಕನ್ನಡ ಭಾರತಿ ಪಿಯು ಕಾಲೇಜು ಪ್ರಾಂಶುಪಾಲ ಡಾ.ನಾಗೇಂದ್ರ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಸ್ಥ ಸಮಾಜದ ಕೈಗನ್ನಡಿಯಾದ ವಚನ ಸಾಹಿತ್ಯದ ಅರಿವು ಮರೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳೆಡೆಗೆ ವಚನಗಳ ನಡಿಗೆ ಒಂದು ಒಳ್ಳೆಯ ವೇದಿಕೆಯಾಗಿದೆ. ಹಾಗೆಯೇ ಶೈಕ್ಷಣಿಕ ರಾಜಧಾನಿ ಕುಶಾಲನಗರದಲ್ಲಿ ವಚನ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಮೂಲಕ ಜನಸಾಮಾನ್ಯರಲ್ಲಿ ವಚನಗಳ ವೈಭವವನ್ನು ಸೂರೆಗೊಳಿಸಲು ಕರೆಕೊಟ್ಟರು.
ಕನ್ನಡ ಭಾರತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಯೂ ಆದ ಕುಶಾಲನಗರ ಪುರಸಭೆ ಅಧ್ಯಕ್ಷ ಜಯವರ್ಧನ, ಕನ್ನಡ ಭಾರತಿ ಪದವಿ ಕಾಲೇಜು ಪ್ರಾಂಶುಪಾಲ ಕೆ.ಎಸ್.ರುದ್ರಪ್ಪ, ವಚನ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ, ಹೆಲ್ಪ್ ಲೈನ್ ಕೆ.ಬಿ.ಗಣೇಶ್, ಉಪನ್ಯಾಸಕ ಮಂಜುನಾಥ, ಮುರುಳಿ, ರಶ್ಮಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!