ಕುಶಾಲನಗರ, ಅ 29: ಕರ್ನಾಟಕ ವಿಧಾನಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಮಾಜಿ ಶಿಕ್ಷಕ, ಉದ್ಯಮಿ ಕೆ.ಕೆ.ಮಂಜುನಾಥ್ ಕುಮಾರ್ ಅವರ ಹೆಸರನ್ನು ಅಂತಿಮಗೊಳಿಸಿ ಎಐಸಿಸಿ ಘೋಷಣೆ ಮಾಡಿದೆ.
ಕೊಡಗು ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿರುವ ಕೆ.ಕೆ.ಮಂಜುನಾಥ್ ಕುಮಾರ್ ತಮ್ಮ ಅಯ್ಕೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು. 17 ವರ್ಷ ಕಾಲ ಶಿಕ್ಷಕನಾಗಿ ಸೇವೆ ಸಲ್ಲಿಸಿ 2012 ರಲ್ಲಿ ಸ್ವಯಂ ನಿವೃತ್ತಿ ಪಡೆದು ಶಿಕ್ಷಕರೇ ಶಾಸಕರಾಗಬೇಕೆಂಬ ಅಭಿಲಾಷೆಯಿಂದ ಸ್ಪರ್ಧಿಸಿ 160 ಮತಗಳ ಅಂತರದಿಂದ ಪರಾಜಯಗೊಳ್ಳಬೇಕಾಯಿತು. ಅಂದಿನ ಆಡಳಿತ ಪಕ್ಷದ ಅಧಿಕಾರ ದುರುಪಯೋಗ ಕಾರಣ ಸೋಲು ಅನುಭವಿಸಬೇಕಾಯಿತು. ಕಳೆದ ಅವಧಿಯಲ್ಲಿ ಸಮ್ಮಿಶ್ರ ಸರಕಾರ ಅಭ್ಯರ್ಥಿ ಕುತಂತ್ರದಿಂದ ಗೆಲುವು ಸಾಧಿಸಿದರು. ಈ ಬಾರಿ ಶಿಕ್ಷಕರ ಒತ್ತಾಸೆಯಿಂದ ಸ್ಪರ್ಧೆ ಬಯಸಿದ ತನ್ನನ್ನು ಅಂತಿಮಗೊಳಿಸಿರುವುದು ಸಂತಸ ತಂದಿದೆ. 2004 ಹಾಗೂ 2006 ರಲ್ಲಿ
ಎನ್.ಪಿ.ಎಸ್ ಜಾರಿಗೆ ಚಿಂತನೆ ಹರಿಸಿದ ಅಂದಿನ ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಸಮ್ಮಿಶ್ರ ಸರಕಾರದ ಬಗ್ಗೆ ಶಿಕ್ಷಕ ಮತದಾರ ಎಚ್ಚೆತ್ತುಕೊಳ್ಳಬೇಕು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವಂತೆ ಒ.ಪಿ.ಎಸ್ ಜಾರಿಗೆ ಕಾಂಗ್ರೆಸ್ ಬದ್ದವಾಗಿದೆ. ಎನ್.ಇ.ಪಿ. ಬದಲಿಗೆ ಎಸ್.ಇ.ಪಿ. ಮುಂದುವರಿಕೆಗೆ ಕಾಂಗ್ರೆಸ್ ಬದ್ದವಾಗಿದೆ. ಇದನ್ನು ಮನಗಂಡು ಶಿಕ್ಷಕರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕಿದೆ. ಅನುದಾನಿತ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ನಿವಾರಿಸಿ ಸೇವಾ ಭದ್ರತೆ ಕಲ್ಪಿಸುವಲ್ಲಿ ಕೂಡ ಪಕ್ಷ ಪ್ರಾತಿನಿಧ್ಯ ನೀಡಲಿದೆ ಎಂದರು.
ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆಯ ಮೂರು ತಾಲೂಕು ವ್ಯಾಪ್ತಿಯ ಅರ್ಹ ಮತದಾರರು ನೋಂದಣಿ ಮಾಡಿಸುವಂತೆ ಮನವಿ ಮಾಡಿದರು.
ತನ್ನ ಆಯ್ಕೆಗೆ ಒಲವು ತೋರಿದ ಎಐಸಿಸಿ, ಕೆಪಿಸಿಸಿ ಸೇರಿದಂತೆ ರಾಜ್ಯದ ವರಿಷ್ಠರು, ಕೊಡಗಿನ ಶಾಸಕರು ಹಾಗೂ ಸರ್ವರಿಗೂ ಅವರು ಧನ್ಯವಾದ ಸಲ್ಲಿಸಿದರು.
Back to top button
error: Content is protected !!