ಕಾರ್ಯಕ್ರಮ

ಕುಶಾಲನಗರದ ವಾಲ್ಮೀಕಿ ಭವನದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ

ಕುಶಾಲನಗರ, ಅ 28: ಮಹರ್ಷಿ ವಾಲ್ಮೀಕಿ ರಾಮಾಯಣದಂತಹ ಮಹಾಕಾವ್ಯ ರಚಿಸಿದರು. ಅದರಂತೆ ಸುತ್ತಮುತ್ತ ನಡೆಯುವ ಘಟನೆಗಳನ್ನು ಅರಿಯುವ ಮೂಲಕ ಜೀವನದಲ್ಲಿ ಪರಿವರ್ತನೆ ಹೊಂದಿ ಮಹತ್ತರ ಸಾಧನೆಗಳನ್ನು ಮಾಡಬೇಕು ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.
ಕುಶಾಲನಗರ
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯು ರಾಮಾಯಣ ಗ್ರಂಥದ ಮೂಲಕ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿದ ದಾರ್ಶನಿಕರು. ಸಾಧಿಸುವ ಮನಸಿದ್ದಲ್ಲಿ, ನಾವು ಏನನ್ನಾದರೂ ಸಾಧಿಸಬಹುದು. ಸಾಮಾನ್ಯ ವ್ಯಕ್ತಿಯೊಬ್ಬ ಮಹಾಕಾವ್ಯ ರಚಿಸುವಷ್ಟರ ಮಟ್ಟಿಗೆ ಜ್ಞಾನ ಸಂಪಾದನೆ ಮಾಡಿ, ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗುವ ದಾರಿಯನ್ನು ತೋರಿಸಿಕೊಟ್ಟ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಗ್ರಂಥದ ನೈತಿಕ ಮೌಲ್ಯಗಳು ಪ್ರತಿ ವ್ಯಕ್ತಿಯ ಜೀವನದಲ್ಲಿ ನಡೆಯುವ ಹಲವು ಘಟನೆಗಳಿಗೆ ಆದರ್ಶಪ್ರಾಯವಾಗಿದೆ ಎಂದರು.
ಮುಖ್ಯ ಬಾಷಣಾಕಾರರಾಗಿ ಪಾಲ್ಗೊಂಡಿದ್ದ ಕನ್ನಡ ಭಾಷಾ ಅಧ್ಯಾಪಕ ವೆಂಕಟನಾಯ್ಕ ಮಾತನಾಡಿ, ಇಡೀ ವಿಶ್ವಕ್ಕೆ ರಾಮಾಯಣದಂತಹ ಮಹಾಕಾವ್ಯ ಕೊಟ್ಟಮಹಾನ್‌ ದಾರ್ಶನಿಕ ಮಹರ್ಷಿ ವಾಲ್ಮೀಕಿ ಅವರ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸೇರಿದಂತೆ ಉತ್ತಮ ಸಮಾಜ ನಿರ್ಮಾಣದ ಮಹತ್ವದ ಸಂಗತಿಗಳನ್ನು ರಾಮಾಯಣ ಮಹಾಕಾವ್ಯದಿಂದ ನಾವು ಕಲಿಯಬಹುದಾಗಿದೆ. ರಾಮರಾಜ್ಯದ ಕನಸಿನ ಪರಿಕಲ್ಪನೆಯನ್ನು ಸೃಷ್ಠಿಸಿದ ಮಹಾಕವಿ ಮಹರ್ಷಿ ವಾಲ್ಮೀಕಿ ಋಷಿಗಳು ಎಂದು ಬಣ್ಣಿಸಿದರು.
ಜಿಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ.ಶಶಿಧರ್ ಮಾತನಾಡಿ, ಆದಿಕವಿ ವಾಲ್ಮೀಕಿ ಅವರು ರಚಿಸಿರುವ ರಾಮಾಯಣದಲ್ಲಿ ಹಲವಾರು ಅಂಶಗಳು ಅಡಕವಾಗಿದೆ. ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ರೀತಿ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಕೆ ಮಾಡಿಕೊಂಡು ಅವರ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ಮಹಾನು ಪುರುಷರ, ಆದರ್ಶ ವ್ಯಕ್ತಿಗಳ ಜಯಂತಿ ಆಚರಣೆಗಳಿಗೆ ಅರ್ಥ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ತಾಲ್ಲೂಕು ತಹಶಿಲ್ದಾರ್ ಕಿರಣ್ ಗೌರಯ್ಯ ಮಾತನಾಡಿ, ಪವಿತ್ರ ಪುಸ್ತಕ ರಾಮಾಯಣದಲ್ಲಿ ಪ್ರೀತಿ,ತ್ಯಾಗ, ಧೃಢತೆ ಮತ್ತು ಖ್ಯಾತಿಯ ಭಾವನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಬೇಡನೊಬ್ಬ ಮಹಾನ್ ಕವಿಯಾಗಿ ಪ್ರಜಾಪ್ರಭುತ್ವದ ಸಮಗ್ರ ಪರಿಕಲ್ಪನೆಯನ್ನು ರಾಮಾಯಣದ ಮೂಲಕ ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದರು.
ಈ ಸಂದರ್ಭ ಸೋಮವಾರಪೇಟೆ ತಾಲ್ಲೂಕು ತಹಸೀಲ್ದಾರ್ ನರಗುಂದ, ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ ಜಯಣ್ಣ, ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್, ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಪ್ರಮುಖರಾದ ಪರಮೇಶ್, ಚಂದನ್, ನಿರ್ವಾಣಪ್ಪ, ಜಯಪ್ಪ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!