ಕುಶಾಲನಗರ, ಮಾ 01: ಕುಶಾಲನಗರ ತಾಲ್ಲೂಕು ಕಂದಾಯ ಇಲಾಖೆ ವತಿಯಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮದಲ್ಲಿಯೇ ಪಹಣಿ, ಪೋಡಿ ದುರಸ್ಥಿ ಮತ್ತು ಕಂದಾಯ ನಿಗದಿ ಆಂದೋಲನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಅವರ ನೇತೃತ್ವದಲ್ಲಿ ಕುಶಾಲನಗರ ತಾಲೂಕಿನ ಗೊಂದಿಬಸವನಹಳ್ಳಿ ಗ್ರಾಮದಲ್ಲಿ ಆಂದೋಲನ ಆರಂಭಿಸಲಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ, ಕೊಡಗು ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಜಮೀನು ದುರಸ್ಥಿಯಾಗದೆ ರೈತರಿಗೆ ಹಕ್ಕು ವರ್ಗಾವಣೆ, ಬ್ಯಾಂಕ್ ಸಾಲ, ಭೂಪರಿವರ್ತನೆ, ಬೆಳೆ ಪರಿಹಾರ ಮುಂತಾದ ಸರ್ಕಾರದ ಯೋಜನೆಯ ಸದುಪಯೋಗ ಪಡೆಯಲು ತೊಂದರೆ ಉಂಟಾಗುತ್ತಿದ್ದು ಈ ಸಂಬಂಧ ಅಂತಹ ಪ್ರಕರಣಗಳನ್ನು ತುರ್ತಾಗಿ ವಿಲೇವಾರಿ ಮಾಡಲು ಕಂದಾಯ ಸಚಿವರ ನಿರ್ದೇಶನ ನೀಡಿದ್ದರು.
ಈ ಹಿನ್ನಲೆಯಲ್ಲಿ ರೈತರಿಗೆ ಅನುಕೂಲವಾಗುವಂತೆ ಪ್ರಾಯೋಗಿಕವಾಗಿ ಒಂದು ಗ್ರಾಮವನ್ನು ಸ್ವಯಂ ಪೈಲೆಟ್ ಗ್ರಾಮವನ್ನಾಗಿ ಆಯ್ಕೆ ಮಾಡಿಕೊಂಡು ಗ್ರಾಮದ ಜಮೀನಿನ ಪಹಣಿಗೆ ಸಂಬಂಧಿಸಿದಂತೆ ಪೈಕಿ ಪಹಣಿ ಒಟ್ಟುಗೂಡಿಸುವುದು, ಸರ್ಕಾರದಿಂದ ಮಂಜೂರಾತಿಗೊಂಡು ಈವರೆಗೂ ದುರಸ್ಥಿ ಆಗದ ಜಮೀನಿನ ಪೋಡಿ ದುರಸ್ಥಿ ಕಾರ್ಯ ಮತ್ತು ಕಂದಾಯಕ್ಕೆ ಬಾರದ ಬಾಣೆ ಜಮೀನಿಗೆ ಕಂದಾಯ ನಿಗದಿಪಡಿಸುವ ಆಂದೋಲನವನ್ನು ನಡೆಸಲು ಕೊಡಗು ಜಿಲ್ಲಾಧಿಕಾರಿಗಳ ಸೂಚನೆ ನೀಡಿದ್ದರು.
ಅದರಂತೆ ಕುಶಾಲನಗರ ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆ ವತಿಯಿಂದ ಜಂಟಿಯಾಗಿ ಪ್ರಾಯೋಗಿಕವಾಗಿ ಗೊಂದಿಬಸವನಳ್ಳಿ ಗ್ರಾಮವನ್ನು ಸ್ವಯಂ ಪೈಲೆಟ್ ಗ್ರಾಮವನ್ನಾಗಿ ಆಯ್ಕೆಮಾಡಿಕೊಂಡು ಈ ಆಂದೋಲನ ಆರಂಭಿಸಲಾಗಿದೆ.
ಗ್ರಾಮದ ರೈತರು/ಖಾತೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ತಂದು ಆಂದೋಲನ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕೋರಿದರು.
ಈ ಸಂದರ್ಭ ತಾಲೂಕು ಅಕ್ರಮಸಕ್ರಮ ಸಮಿತಿ ಅಧ್ಯಕ್ಷ ಗೋವಿಂದಪ್ಪ, ಉಪ ತಹಸೀಲ್ದಾರ್ ಮಧುಸೂದನ್, ಕಂದಾಯ ನಿರೀಕ್ಷಕ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಗೌತಮ್ ಸೇರಿದಂತೆ ಸರ್ವೆಯರ್ ಗಳಾದ ವೆಂಕಟೇಶ್, ಸಿದ್ದರಾಜು ಹಾಗೂ ಗ್ರಾಮಸ್ಥರು ಇದ್ದರು.
Back to top button
error: Content is protected !!