ಕುಶಾಲನಗರ, ಸೆ 10: ಕನ್ನಡ ಸಾಹಿತ್ಯ ಪರಿಷತ್ ಕುಶಾಲನಗರ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಲಾಭವನದಲ್ಲಿ ನಡೆಯಿತು.
ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವಧಿಯಲ್ಲಿ ಕನ್ನಡ ಭಾಷೆ ಉಳಿವಿಗೆ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು. ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ. ಕರ್ನಾಟಕ ರಾಜ್ಯದಲ್ಲಿ ಕೂಡ ವಿವಿಧತೆಯಲ್ಲಿ ಏಕತೆ ಕಾಣಸಿಗುತ್ತದೆ.
ಕರ್ನಾಟಕ ಏಕೀಕರಣದ ಉದ್ದೇಶ ಹಾಗೂ ವಿವಿಧೆಡೆಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸಲು ಸಾಹಿತ್ಯ ಪರಿಷತ್ತಿನ ಸ್ಥಾಪನೆಯಾಯಿತು. ವಿವಿಧ ರಾಜ್ಯ, ಪ್ರಾಂತ್ಯಗಳಲ್ಲಿ ನೆಲೆಸಿದ್ದ ಕನ್ನಡಗರಿಗಾಗಿ, ಕನ್ನಡದ ಕಲೆ ಬೆಳೆಸಲು ಕಸಾಪ ವೇದಿಕೆಯಾಯಿತು ಎಂದರು.
ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಲ್ಲಿ ರಾಜಮನೆತನ, ಆಡಳಿತಗಾರರ ಕೊಡುಗೆ ಅಪಾರವಿದೆ.
ಮುಂಬರುವ ಪೀಳಿಗೆ ಹಿಂದಿನ ತಲೆಮಾರಿನ ಮೇಧಾವಿಗಳ ಸಾಮಾಜಿಕ ದೂರದೃಷ್ಠಿಯ ಚಿಂತನೆಗಳನ್ನು ಅರಿತು ಅವರ ಸಾಧನೆ, ಕೊಡುಗೆಗಳನ್ನು ಸ್ಮರಿಸಿಕೊಳ್ಳುವುದು ಅವಶ್ಯಕತೆಯಿದೆ.
ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಕೊಡಗಿನ ಸಂಸ್ಕೃತಿ, ಪರಿಸರವನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಮಾತನಾಡಿ, ನಮ್ಮ ಮಕ್ಕಳಲ್ಲಿ ಸಾಹಿತ್ಯ, ಸಂಸ್ಕೃತಿ, ಭಾಷಾ ಪ್ರೇಮ ಬಿತ್ತಿ ಬೆಳೆಸುವಂತಾಗಬೇಕಿದೆ. ಶೇ. 70 ರಷ್ಟು ಪೂರ್ಣಗೊಂಡಿರುವ ಕಲಾಭವನ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಅನುದಾನ ಬಿಡುಗಡೆಗೆ ಕ್ರಮವಹಿಸಿ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತ್ಯ ಪರಿಷತ್ ಬೆಳೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಕುಶಾಲನಗರ ಕಲಾಭವನ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಿದರು.
ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಕೆ.ಎಸ್.ನಾಗೇಶ್ ನೇತೃತ್ವದ ನೂತನ ತಂಡಕ್ಕೆ ಪ್ರಮಾಣ ವಚನ ಬೋಧಿಸಿ ಅಧಿಕಾರ ಹಸ್ತಾಂತರಿಸಿದರು. ರಾಜವಶಂಸ್ಥ ಯದುವೀರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಕಲಾಭವನ ಆವರಣದಲ್ಲಿ ಗಿಡ ನೆಡಲಾಯಿತು.ಕಾರ್ಯಕ್ರಮದಲ್ಲಿ ನಾಡ ಗೀತೆ, ರೈತ ಗೀತೆ ಮೊಳಗಿದವು.