ಸುದ್ದಿಗೋಷ್ಠಿ

13 ರಂದು ಲ್ಯಾಂಪ್ಸ್ ಸೊಸೈಟಿ ಚುನಾವಣೆ: ನೈಜ ಗಿರಿಜನ ಅಭ್ಯರ್ಥಿಗಳನ್ನು ಗೆಲ್ಲಿಸಲು ಮನವಿ

ಕುಶಾಲನಗರ ಫೆ 04: ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿಯ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಫೆ.13 ರಂದು ಚುನಾವಣೆ ನಡೆಯುತ್ತಿದ್ದು,ಸದಸ್ಯರು ನೈಜ ಗಿರಿಜನರಿಗೆ ಮತ ನೀಡಿ ಜಯಶೀಲರನ್ನಾಗಿ ಮಾಡುವ ಮೂಲಕ ಲ್ಯಾಂಪ್ಸ್ ಸೊಸೈಟಿ ಉಳಿಸಬೇಕು ಎಂದು ಸೋಲಿಗ ಗಿರಿಜನ ಸಂಘದ ಅಧ್ಯಕ್ಷ ಬಿ.ಪಿ.ಮಹೇಶ್ ಹೇಳಿದರು.

ಕುಶಾಲನಗರದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು,
1965 ರಲ್ಲಿ ಪ್ರತ್ಯೇಕವಾದ ಲ್ಯಾಂಪ್ಸ್ ಸಹಕಾರ ಸಂಘ ಸ್ಥಾಪನೆಗೊಂಡಿತು. ಮಾಜಿ ಅಧ್ಯಕ್ಷರಾದ
ಕಾಳಪ್ಪ,ನಾಗೇಂದ್ರ,ತಮ್ಮಯ್ಯ,ಜೆ.ಪಿ.ರಾಜು,ಚಂದ್ರು ಅವರು
ಸೊಸೈಟಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ‌ ಮೂಲಕ ಲಾಭದಾಯಕ ಮಾಡಿದ್ದರು. ನಂತರ ಬಂದ ಅಧ್ಯಕ್ಷರು ಸಂಘದ ಹಣವನ್ನು ದುರುಪಯೋಗ ಮಾಡಿಕೊಂಡು ಪರಿಣಾಮ ಸಂಘದ ಅಭಿವೃದ್ಧಿ ಕುಂಠಿತಗೊಂಡಿತು ಎಂದು ದೂರಿದರು.
ತಾಲ್ಲೂಕಿನ ಗಿರಿಜನರ ಶ್ರೇಯೋಭಿವೃದ್ಧಿಗಾಗಿ ಕಳೆದ ಆರು ದಶಕಗಳ ಹಿಂದೆ ಆರಂಭಗೊಂಡ ಗಿರಿಜನ ‌ವಿವಿಧೋದ್ದೇಶ ಸಹಕಾರ ಸಂಘವು ಮೂರು ಸಾವಿರಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ತಪ್ಪಿನಿಂದ ಬಹುತೇಕ ಸದಸ್ಯರು ಮತದಾನದಿಂದ ವಂಚಿತಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಳ್ಳು ಜಾತಿ ಪ್ರಮಾಣ ಪತ್ರ ವಿಚಾರ ನ್ಯಾಯಾಲಯದಲ್ಲಿದ್ದು ಗಿರಿಜನರ ಹೆಸರಿನಲ್ಲಿ ಚುನಾವಣೆಗೆ ಸ್ಪರ್ಧಿಸಿದವರ ವಿರುದ್ದ ಜಾತಿ ಪರಿಶೀಲನಾ ಸಮಿತಿ ಕ್ರಮವಹಿಸಬೇಕಿದೆ ಎಂದು ಆಗ್ರಹಿಸಿದರು.

ಲ್ಯಾಂಪ್ಸ್ ಸೊಸೈಟಿ ಮಾಜಿ ಅಧ್ಯಕ್ಷ ಆರ್.ಕೆ.ಚಂದ್ರು ಮಾತನಾಡಿ, ನೈಜ ಫಲಾನುಭವಿಗಳು ಅವಕಾಶದಿಂದ ವಂಚಿತಾರಾಗುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿದರು.

ಲ್ಯಾಂಪ್ಸ್ ಸಂಘದಲ್ಲಿ ಕೇವಲ 177 ಮಂದಿ‌ ಸದಸ್ಯರು ಮಾತ್ರ ಮತದಾರರ ಪಟ್ಟಿಯಲ್ಲಿ ಇದ್ದಾರೆ.ಇನ್ನೂ ಬಹುತೇಕ ಸದಸ್ಯರನ್ನು ಕೈಬಿಡಲಾಗಿದೆ ಎಂದು ದೂರಿದರು.ಸಂಘದ ಷೇರು ಭರ್ತಿ ಮಾಡುವ ಬಗ್ಗೆ ಸದಸ್ಯರಿಗೆ ಯಾವುದೇ ನೋಟಿಸ್ ನೀಡಿಲ್ಲ. ಕಾಲಾವಕಾಶ ಕೂಡ ನೀಡಿಲ್ಲ.
ಇದರಿಂದ ಸದಸ್ಯರಿಗೆ ಮಾಹಿತಿ ಕೊರತೆಯಿಂದ ಸಂಘದ ಹಣ ರೂ.1000 ಪಾವತಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ
ಸಾವಿರಾರು ಮಂದಿ ಸದಸ್ಯರು ಮತದಾನದಿಂದ ವಂಚಿತರಾಗಿದ್ದಾರೆ.ಹಿಂದಿನ ಆಡಳಿತ‌ ಮಂಡಳಿ ಸರ್ಕಾರದಿಂದ ಬರುವ ಅನುದಾನದಲ್ಲಿ ಸದಸ್ಯರ ಷೇರು ಹಣವನ್ನು ಭರ್ತಿ‌ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ದೂರಿದ್ದಾರೆ.

ಕರ್ನಾಟಕ ಜೇನು ಕುರುಬರ ಸಂಘಟನಾ ಕಾರ್ಯದರ್ಶಿ ಜೆ.ಟಿ.ಕಾಳಿಂಗ ಮಾತನಾಡಿ, ಕೆಲವು ವ್ಯಕ್ತಿಗಳು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ನೈಜ ಗಿರಿಜನರಿಗೆ ಸಿಗಬೇಕಾದ ಸೌಲಭ್ಯಗಳನ್ನು ವಂಚಿಸಿ ತಮ್ಮದಾಗಿಸಿಕೊಳ್ಳುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಗಿರಿಜನರ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರ ಹಾಗೂ ನೀಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗುತ್ತದೆ ಎಂದರು.

ಗಿರಿಜನರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಉಗ್ರ ಹೋರಾಟ ನಡೆಸಲು ಚಿಂತನೆ ನಡೆಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಸೋಲಿಗರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ಬಿ.ಎಚ್.ಸಿದ್ಧಲಿಂಗ, ಗಿರಿಜನ ಮುಖಂಡರಾದ ಜೆ.ಕೆ.ನಂಜಯ್ಯ,ಜೆ.ಎನ್.ವಸಂತ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us