ಪ್ರಕಟಣೆ
ವಂಚನೆ ಆರೋಪ: ದಾಖಲೆ ಸಹಿತ ಬಹಿರಂಗಪಡಿಸಲು ಒತ್ತಾಯ

ಕುಶಾಲನಗರ, ಆ 29: ಕೂಡು ಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಮಹಾಸಭೆಯಲ್ಲಿ ಬಹಿರಂಗವಾಗಿ ತನ್ನ ಬಗ್ಗೆ ಮೋಸ ವಂಚನೆ ಕರ್ತವ್ಯ ಲೋಪ ಆರೋಪ ವ್ಯಕ್ತಪಡಿಸಿದ ಸಂಘದ ಅಧ್ಯಕ್ಷರಾದ ಕೆ ಕೆ ಹೇಮಂತ್ ಕುಮಾರ್ ಅವರ ವರ್ತನೆ ಬಗ್ಗೆ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಣಾಧಿಕಾರಿ ಹಾಗೂ ಸಂಘದ ಸದಸ್ಯರಾಗಿರುವ ಎಂ ವಿ ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರು ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿ ಸಂಘದಲ್ಲಿ ನನ್ನ ಸೇವಾ ಅವಧಿಯಲ್ಲಿ ಯಾವುದೇ ಕರ್ತವ್ಯ ಲೋಪವಿಲ್ಲದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಈ ತಿಂಗಳ 26ರಂದು ಸಂಘದ ವಾರ್ಷಿಕ ಮಹಾಸಭೆಯಲ್ಲಿ ಲೆಕ್ಕಪರಿಶೋಧನೆ ಪುಸ್ತಕದಲ್ಲಿ ಮರಣ ಪರಿಹಾರ ನಿಧಿಯ ವಿವರ ಕೇಳಿದಾಗ ಅಧ್ಯಕ್ಷರು ಅದಕ್ಕೆ ಸಮರ್ಪಕ ರೀತಿಯ ಉತ್ತರ ನೀಡದೆ ತನ್ನ ವಿರುದ್ಧ ಸಭೆಯಲ್ಲಿ ಸಂಘಕ್ಕೆ ವಂಚನೆ ಮಾಡಿರುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಇದರಿಂದ ಸಂಘದ ಸರ್ವ ಸದಸ್ಯರ ಮನಸ್ಸಿನಲ್ಲಿ ತನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿದ್ದಾರೆ.
ಈ ಬಗ್ಗೆ ಕೆಲವು ಪತ್ರಿಕಾ ಮಾಧ್ಯಮಗಳಲ್ಲಿ ಕೂಡ ಈ ವರದಿ ಪ್ರಕಟವಾಗಿದೆ.
ನಾನು 2016ಕ್ಕೆ ಸೇವೆಯಿಂದ ನಿವೃತನಾಗಿದ್ದು, ತನ್ನ ಸೇವಾ ಅವಧಿಯಲ್ಲಿ ಸಂಘಕ್ಕೆ ಯಾವುದೇ ರೀತಿಯ ಮೋಸ ವಂಚನೆ ಮಾಡಿರುವುದಿಲ್ಲ ಎಂದು ದಾಖಲೆಗಳ ಸಹಿತ ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ಸಂಘಕ್ಕೆ ವಂಚನೆಯಾಗಿದ್ದಲ್ಲಿ ಅದರ ದಾಖಲಾತಿಯನ್ನು ಅಧ್ಯಕ್ಷರು ಬಹಿರಂಗಪಡಿಸಬೇಕು ಇಲ್ಲದಿದ್ದಲ್ಲಿ ಸಂಘದ ಅಧ್ಯಕ್ಷರಾದ ಕೆ ಕೆ ಹೇಮಂತ್ ಕುಮಾರ್ ಅವರ ಮೇಲೆ ನ್ಯಾಯ ಕೋರಿ ನ್ಯಾಯಾಲಯದಲ್ಲಿ ಮಾನ-ನಷ್ಟ ಮೊಕ್ಕದಮ್ಮೆ ಹೂಡುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಕೇಶವ ರೈ ಸ್ಥಳೀಯರಾದ ಕೆ ಜಯಂತ್ ಇದ್ದರು.