ಕುಶಾಲನಗರ ಆ 22: ಮನೆಯ ಮುಂದೆ ಮತ್ತು ಹಿಂದೆ ಹರಿಯುತ್ತಿರುವ ಜನವಸತಿಯ ಶೌಚಾಲಯದ ತ್ಯಾಜ್ಯ.ಇಡೀ ಬೀದಿಗೆ ವ್ಯಾಪಿಸಿದ ದುರ್ವಾಸನೆ….
ವಾಸನೆ ತಡೆಯಲಾರದೆ ಮನೆಗಳನ್ನು ತೊರೆಯುತ್ತಿರುವ ಗಿರಿಜನ ವಾಸಿಗಳು…
ಕಾಲರಾ, ಡೆಂಘೇ ಯಂತಹ ಸಾಂಕ್ರಾಮಿಕ ರೋಗಗಳು ಹರಡಿದರೆ ಜಿಲ್ಲಾಡಳಿತವೇ ಹೊಣೆ ಎಂದು ಎಚ್ಚರಿಕೆ ನೀಡಿರುವ ಗಿರಿಜನ ಮಹಿಳೆಯರು…
ಇಂತಹ ಪ್ರಸಂಗ ಹಾಗೂ ಪ್ರಹಸನ ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯ ಗಿರಿಜನ ಪುನರ್ವಸತಿ ಶಿಬಿರದಲ್ಲಿ ಕಳೆದ ಹಲವು ತಿಂಗಳಿಂದಲೂ ಇದ್ದು ಇಲ್ಲಿನ ಮಂದಿ ಹೈರಾಣಾಗಿ ಹೋಗಿದ್ದಾರೆ.
ಕಳೆದ ಐದು ವರ್ಷಗಳ ಹಿಂದೆ ನಿವೇಶನ ಹಾಗೂ ಸೂರು ವಂಚಿತ ಗಿರಿಜನ ವಾಸಿಗಳಿಗಾಗಿ ಕೊಡಗು ಜಿಲ್ಲಾಡಳಿತ ಕೋಟ್ಯಾಂತರ ರೂಗಳನ್ನು ಖರ್ಚು ಮಾಡಿ ನಿರ್ಮಿಸಿದ ಪುನರ್ವಸತಿ ಕೇಂದ್ರ ಈಗ ಅವ್ಯವಸ್ಥೆಗಳ ಆಗರವಾಗಿ ಮಾರ್ಪಟ್ಟಿದ್ದರೂ ಕೂಡ ಸಂಬಂಧಿತ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಇಲ್ಲಿನ ವಾಸಿಗಳ ಅಳಲು.
ನೂರಾರು ಸಂಖ್ಯೆಯಲ್ಲಿ ನಿರ್ಮಿಸಿರುವ ಮನೆಗಳ ಶೌಚಾಲಯದ ತ್ಯಾಜ್ಯ ಹರಿವ ಪೈಪು ಒಡೆದು ಹಾಳಾಗಿ ತಗ್ಗು ಪ್ರದೇಶದ ವಸತಿ ಪ್ರದೇಶದಲ್ಲಿ ಹರಿದು ಅವಾಂತರ ಸೃಷ್ಟಿದಿದ್ದರೂ ಕೂಡ ಸ್ಥಳೀಯ ಗ್ರಾಮ ಪಂಚಾಯಿತಿಯಾಗಲೀ, ಜಿಲ್ಲಾಡಳಿತವಾಗಲೀ ಈ ಬಗ್ಗೆ ನಮ್ಮ ಸಮಸ್ಯೆ ಆಲಿಸುತ್ತಲೂ ಇಲ್ಲ. ಪರಿಹರಿಸುತ್ತಲೂ ಇಲ್ಲ ಎಂದು ಇಲ್ಲಿನ ಗಿರಿಜನ ನಿವಾಸಿಗಳಾದ ಸುಶೀಲ, ಬೆಳ್ಳಿ, ಲತಾ, ಸಿದ್ದಯ್ಯ, ಲಿಂಗಪ್ಪ, ಮಾರ ಮೊದಲಾದವರು ಸ್ಥಳಕ್ಕೆ ತೆರಳಿದ್ದ ‘ ಪ್ರತಿನಿಧಿ ‘ ಯೊಂದಿಗೆ ದೂರಿಕೊಂಡರು.
ಶೌಚದ ತ್ಯಾಜ್ಯ ನೀರು ಮನೆಯ ಸುತ್ತಲೂ ಹರಿದ ಕಾರಣ ಮನೆಯೊಳಗೆ ಬರುವ ಸೊಳ್ಳೆಗಳು, ನೊಣಗಳು ಹಾಗೂ ದುರ್ವಾಸನೆ ತಡೆಯಲಾರದೇ ಸುಶೀಲ ಹಾಗೂ ಸಿದ್ದಯ್ಯ ಎಂಬ ದಂಪತಿಗಳು ತಮಗೆ ಸರ್ಕಾರ ಕೊಟ್ಟ ಮನೆಯನ್ನೇ ತೊರೆದು ಬೇರೆಡೆ ವಾಸವಿದ್ದಾರೆ.
ಇನ್ನೂ ಸಮೀಪದ ಮತ್ತೊಂದು ಮನೆಯ ವಾಸಿ ಲತಾ ಹಾಗೂ ಸಿದ್ದಯ್ಯ ಅವರು ಬೇರೆ ವಿಧಿಯಿಲ್ಲದೇ ದುರ್ವಾಸನೆ ನಿಗ್ರಹಕ್ಕೆ ಮನೆಯ ಸುತ್ತಲೂ ಹರಕು ಮುರಕು ಶೀಟುಗಳು, ಪ್ಲಾಸ್ಟಿಕ್ ಹೊದಿಕೆಗಳನ್ನು ಮನೆಯ ಸುತ್ತಲೂ ಕಟ್ಟಿಕೊಂಡು ಅತ್ಯಂತ ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.
ಇನ್ನೂ ಇದೇ ದಂಪತಿಗಳಿಗೆ ಎಳೆಯ ಮಗು ಒಂದಿದ್ದು ಏನಾದರೂ ಅನಾರೋಗ್ಯ ಬಾಧಿಸಿ ಸಾಂಕ್ರಾಮಿಕ ರೋಗಕ್ಕೆ ತುತ್ತಾದರೆ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಎಚ್ಚರಿಸಿದ್ದಾರೆ.
ಇನ್ನು ಸುಶೀಲ ಎಂಬಾಕೆ, ಜಿಲ್ಲಾಧಿಕಾರಿಗಳು ಅಥವಾ ಯಾರಾದರೂ ಅಧಿಕಾರಿಗಳು ನಮ್ಮ ಮನೆಯ ಪರಿಸರಕ್ಕೆ ಬಂದು ಕಣ್ಣು, ಮೂಗು ಮುಚ್ಚದೇ ಕ್ಷಣ ಹೊತ್ತು ನಿಲ್ಲಲಿ ನೋಡೋಣ ಎಂದು ತಾವು ಅನುಭವಿಸುತ್ತಿರುವ ದುಸ್ಥಿತಿಯನ್ನು ನೋವಿನ ಮೂಲಕ ಹೊರಹಾಕಿದ್ದಾರೆ.
ಇದೇ ಬೀದಿಯಲ್ಲಿ ಹತ್ತಾರು ಮಕ್ಕಳಿದ್ದು ವಾಸನೆ ಬೀರುವ ರಸ್ತೆಯಲ್ಲಿಯೇ ಆಟವಾಡುತ್ತಾರೆ.
ಇನ್ನು ಗರ್ಭಿಣಿ, ಬಾಣಂತಿ ಮಹಿಳೆಯರೂ ಕೂಡ ಇಲ್ಲಿ ಇದ್ದು ಇಲ್ಲಿನ ಸ್ಥಿತಿ ಕಂಡು ಹೆದರಿ ಮನೆಗಳ ಬಾಗಿಲನ್ನು ತೆರೆಯುತ್ತಿಲ್ಲ.
ಕಾಫಿ ತೋಟಗಳ ಕೂಲಿಯನ್ನೇ ಆಶ್ರಯಿಸಿ ಬದುಕು ಸಾಗಿಸುತ್ತಿರುವ ಈ ಪುನರ್ವಸತಿ ಕೇಂದ್ರದ ಮಂದಿ ದಿನದ ಬೆಳಗಾದರೆ ಕೂಲಿಗೆ ಹೋಗಿ ಸಂಜೆ ಬಳಲಿ ಮನೆಗೆ ಬರುತ್ತಾರೆ. ಮನೆ ಬಳಿ ಬಂದು ಸಮಾಧಾನದಿಂದ ವಿಶ್ರಮಿಸಲಾರದಷ್ಟು ಕೆಟ್ಟ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿರುವುದರಿಂದ ಜಿಲ್ಲಾಡಳಿತ ಇತ್ತ ಗಮನ ಹರಿಸುವುದೇ ಕಾದು ನೋಡಬೇಕಿದೆ.
Back to top button
error: Content is protected !!