ಕುಶಾಲನಗರ ಆ.21 : ಕೊಡಗು ವಿಶ್ವವಿದ್ಯಾನಿಲಯವು ಅಧ್ಯಾಪಕರ ಅಭಿವೃದ್ಧಿಯ ಮಹತ್ವವನ್ನು ಅರ್ಥಮಾಡಿಕೊಂಡು ಅಧ್ಯಾಪಕರ ಕೌಶಲ್ಯ ಅಭಿವೃದ್ಧಿ, ಜ್ಞಾನ ಮತ್ತು ಬೋಧನಾ ವಿಧಾನಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಡಾ.ಸೀನಪ್ಪ ಹೇಳಿದರು.
ಕರ್ನಾಟಕ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಬೆಂಗಳೂರಿನ ಫೋರ್ಕ್ ಟೆಕ್ನೊಲಾಜಿಸ್ ಹಾಗೂ ಕೊಡಗು ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ಎರಡು ವಾರಗಳ ಕಾಲ ವಿವಿಧ ಕಾಲೇಜುಗಳ ಅಧ್ಯಾಪಕರಿಗೆ ನಡೆಯುವ “ಅಧ್ಯಾಪಕರ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ”ವನ್ನು ಉದ್ಘಾಟಿಸಿ ಮಾತನಾಡಿದರು.
ನೂತನವಾಗಿ ಆರಂಭವಾಗಿರುವ ಕೊಡಗು ವಿಶ್ವವಿದ್ಯಾನಿಲಯವು ಶೈಕ್ಷಣಿಕ ಪ್ರಗತಿಯಲ್ಲಿ ಪ್ರಮುಖ ಮೈಲಿಗಲ್ಲನ್ನು ಹೊಂದಿದ್ದು, ಯುವ ವಿದ್ಯಾರ್ಥಿಗಳ ಮನಸ್ಸು ಮತ್ತು ಸಮಾಜದ ಭವಿಷ್ಯವನ್ನು ರೂಪಿಸುವ ಸಲುವಾಗಿ ಬೋಧನಾ ವಿಭಾಗದ ಸದಸ್ಯರ ಕೌಶಲ್ಯ ಮತ್ತು ಸಾಮಥ್ರ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಆರಂಭಿಕ ಹಂತವಾಗಿ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಇಂದಿನ ವೇಗದ ಮತ್ತು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ, ಅಧ್ಯಾಪಕರು ನವೀಕೃತವಾಗಿರುವುದು ಬಹಳ ಮುಖ್ಯ. ಶಿಕ್ಷಣ ಕ್ಷೇತ್ರದಲ್ಲಿ ಆಧುನಿಕ ಯುಗದ ಸವಾಲುಗಳನ್ನು ಎದುರಿಸುವ ಸಲುವಾಗಿ
ಅಧ್ಯಾಪಕರುಗಳಿಗೆ ನವೀನ ಬೋಧನಾ ವಿಧಾನಗಳು, ಪರಿಣಾಮಕಾರಿ ತರಗತಿ ನಿರ್ವಹಣೆ, ಸಂಶೋಧನಾ ವಿಧಾನಗಳು, ಸುಧಾರಿತ ಶಿಕ್ಷಣ ವಿಧಾನಗಳು ಮತ್ತು ಶಿಕ್ಷಣದಲ್ಲಿ ತಂತ್ರಜ್ಞಾನದ ಏಕೀಕರಣ, ಬೋಧನಾ ಕೌಶಲ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುವ ಸಲುವಾಗಿ ಅಧ್ಯಾಪಕರಿಗೆ ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ ಎಂದರು.
ಕೊಡಗು ವಿಶ್ವವಿದ್ಯಾನಿಲಯ ಸ್ಥಾಪನೆ ಬಹುಕಾಲದ ಕನಸಾಗಿದ್ದು, ವಿಶ್ವವಿದ್ಯಾಲಯದ ಅಡಿಯಲ್ಲಿರುವ ಎಲ್ಲಾ ಸಂಸ್ಥೆಗಳ ಬೆಳವಣಿಗೆ ಪೂರಕವಾಗಿದೆ. ಕೊಡಗಿನ ಕುಶಾಲನಗರದ ಚಿಕ್ಕ ಅಳುವಾರದ ಜ್ಞಾನ ಕಾವೇರಿ ಕ್ಯಾಂಪಸ್‍ನಲ್ಲಿ 2022ರಲ್ಲಿ ಸ್ಥಾಪಿತವಾದ ಕೊಡಗು ವಿಶ್ವವಿದ್ಯಾನಿಲಯ ತನ್ನ ಕಾರ್ಯವನ್ನು ಪ್ರಾರಂಭಿಸಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಸ್ಥೆಯು ಅಪಾರ ಸಾಮಥ್ರ್ಯವನ್ನು ಹೊಂದಿದೆ. ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳು ಕೊಡಗು ವಿಶ್ವವಿದ್ಯಾನಿಲಯದ ಅಭಿವೃದ್ಧಿಗೆ ಭೂಮಿ ಮತ್ತು ಮೂಲ ಸೌಕರ್ಯ ಒದಗಿಸುವಲ್ಲಿ ಸಹಕಾರ ನೀಡಬೇಕೆಂದು ಮನವಿ ಮಾಡಿದ ಅವರು, ಕೊಡಗು ವಿಶ್ವ ವಿದ್ಯಾನಿಲಯದ ಮುಂದಿರುವ ಸವಾಲುಗಳು ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ. ಬಿ.ರಾಘವ, ಕೊಡಗು ವಿಶ್ವವಿದ್ಯಾನಿಲಯ ದೂರ ದೃಷ್ಠಿಯನ್ನು ಇಟ್ಟುಕೊಂಡು ಬದಲಾವಣೆ ತರುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯ ಒಳಗೊಂಡಿರುವ 22 ಕಾಲೇಜುಗಳ ಅಧ್ಯಾಪಕರುಗಳಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡು ಕ್ರಾಂತಿಕಾರಿ ಬದಲಾವಣೆ ಮಾಡುತ್ತಿದೆ.
ಬೋಧಕ ವರ್ಗದವರು ಇಂದಿನ ತಾಂತ್ರಿಕತೆಗೆ ನವೀಕರಣಗೊಂಡು ವಿದ್ಯಾರ್ಥಿಗಳಲ್ಲಿ ಬದಲಾವಣೆ ತರಲು ಈ ತರಬೇತಿ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.
ಕೊಡಗು ಶೈಕ್ಷಣಿಕವಾಗಿ ಅಭಿವೃದ್ಧಿ ಕಂಡಿಲ್ಲ ಎಂಬ ಉದ್ದೇಶದಿಂದ ವಿದ್ಯಾರ್ಥಿಗಳು ಹೊರ ಜಿಲ್ಲೆಗಳಿಗೆ ತೆರಳುತ್ತಿದ್ದು, ಅಂತಹ ಮನೋಭವನೆಯನ್ನು ದೂರಮಾಡುವಂತಾಗಬೇಕು. ಜಿಲ್ಲೆಯಲ್ಲಿ ಸಮರ್ಥ ಶಿಕ್ಷಕರಿದ್ದು, ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಿ ಉತ್ತಮ ಅಂಕ ನೀಡಲು ಶಿಕ್ಷಕರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಬೆಂಗಳೂರಿನ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ತರಬೇತುದಾರ ಶ್ರೀ. ಅವಿನಾಶ ರವರು, ತಂತ್ರಜ್ಞಾನವನ್ನು ಅವಳಡಿಸಿಕೊಂಡು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕುರಿತು ಅಧ್ಯಾಪಕರಿಗೆ ತರಬೇತಿ ನೀಡಲಿದ್ದಾರೆ.
ವೇದಿಕೆಯಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರೊ. ಈ.ತಿಪ್ಪೆಸ್ವಾಮಿ, ಪ್ರೊ.ಗಾಯತ್ರಿದೇವಿ, ಪ್ರೊ.ಕೃಷ್ಣ ಉಪಸ್ಥಿತರಿದ್ದರು. ವಿವಿಧ ಕಾಲೇಜಿನ ಅಧ್ಯಾಪಕರು ಹಾಜರಿದ್ದರು.
ಕಾಲೇಜು ಸಿಬ್ಬಂದಿ ಚಂದ್ರಾವತಿ ಪ್ರಾರ್ಥಿಸಿದರು. ಎಂ.ಎ.ಕೊಡವ ವಿಭಾಗದ ಸಂಯೋಜಕ ರವಿಶಂಕರ್ ನಾಣಯ್ಯ ನಿರೂಪಿಸಿದರು. ಆಂಗ್ಲ ವಿಭಾಗದ ಸಂಯೋಜಕ ಪ್ರೋ.ಪೂಣಚ್ಚ ವಂದಿಸಿದರು.
Back to top button
error: Content is protected !!