ಕಾರ್ಯಕ್ರಮ

ಕುಶಾಲನಗರ ತಾಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ

ಕುಶಾಲನಗರ, ಆ 20: ಕುಶಾಲನಗರ ತಾಲೂಕು ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ರೈತ ಸಹಕಾರ ಭವನದಲ್ಲಿ ನಡೆಯಿತು.

ನಾಡಪ್ರಭು ಕೆಂಪೇಗೌಡ, ಬಾಲಗಂಗಾಧರನಾಥ ಸ್ವಾಮೀಜಿಗಳ‌ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ‌ ಮಾಡಿ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿದರು.

ಲೋಕಸಭಾ ಸಂಸದ ಪ್ರತಾಪ್ ಸಿಂಹ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕರ್ನಾಟಕ ರಾಜ್ಯದಾದ್ಯಂತ ಕೆಂಪೇಗೌಡ ಜಯಂತಿ ಆಚರಣೆಯಾಗಬೇಕಿದೆ.‌ ಕೆಂಪೇಗೌಡರು ಕೇವಲ‌ ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಬೆಂಗಳೂರಿನಲ್ಲಿ ಜೀವನ‌ ಕಂಡುಕೊಂಡಿರುವ ಪ್ರತಿಯೊಬ್ಬರೂ ಅವರನ್ನು ಸ್ಮರಿಸಬೇಕಿದೆ.

ಕರ್ನಾಟಕಕ್ಕೆ ಶೇ.52 ರಷ್ಟು ಆದಾಯ ಒದಗಿಸುತ್ತಿರುವ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಕೊಡುಗೆ ಅನನ್ಯ. ರಾಜ್ಯ ಸೇರಿದಂತೆ ನೆರೆ ರಾಜ್ಯಗಳ ಜನರಿಗೆ ಉದ್ಯೋಗವಕಾಶ, ಜೀವನಕ್ಕೆ ಆಧಾರ ಕಲ್ಪಿಸಿರುವ ಬೆಂಗಳೂರು ಪರೋಕ್ಷವಾಗಿ ಅಲ್ಲಿ ‌ನೆಲೆಸಿರುವ ಪ್ರತಿಯೊಬ್ಬರಿಗೂ ಕೆಂಪೇಗೌಡರ ನಡುವೆ ಸಂಬಂಧ ಉಂಟುಮಾಡಿದೆ ಎಂದರು.

ಇಂದು‌ ಸುಂದರವಾದ ಮನೆಯೊಂದನ್ನು ನಿರ್ಮಾಣ‌ ಮಾಡಲು ಆತಂಕಪಡುವ ನಮಗೆ, 500 ವರ್ಷಗಳ ಹಿಂದೆ ಬೃಹತ್ ಬೆಂಗಳೂರು ನಿರ್ಮಾಣ‌ ಕಲ್ಪನೆ ಹೊಂದಿದ ಕೆಂಪೇಗೌಡರ ದೂರದೃಷ್ಠಿಯನ್ನು ಪ್ರಶಂಸಿಸಬೇಕಿದೆ. ಎಲ್ಲಾ ಜನಾಂಗದವರ ವ್ಯಾಪಾರ ವಹಿವಾಟಿಗೆ ವೇದಿಕೆ ಕಲ್ಪಿಸಿದ ಅವರ ಸಮಾನತೆ ಭಾವನೆ ಕೊಂಡಾಡಬೇಕಿದೆ ಎಂದರು.

ಅತಿಥಿಗಳಾಗಿ ಪಾಲ್ಗೊಂಡಿದ್ದ‌ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಮಾತನಾಡಿ, ಅಭಿವೃದ್ಧಿ ಎಂಬುದು ಅನಿಯಂತ್ರಿತವಾಗಬಾರದು. ಹೆಚ್ಚುತ್ತಿರುವ ಜನಸಂಖ್ಯೆಯಿಂದ ದಟ್ಟಣೆ ಉಂಟಾಗುತ್ತಿದೆ. ಸಾರ್ವಜನಿಕರಿಗೆ ಅನಾನುಕೂಲ ಉಂಟುಮಾಡದೆ ನಿಯಂತ್ರಿತ‌ ಮಾದರಿಯಲ್ಲಿ ವೈಜ್ಞಾನಿಕವಾಗಿ ಅಭಿವೃದ್ಧಿ ಕಾರ್ಯ ನಡೆಯಬೇಕಿದೆ ಎಂದರು. ಕುಶಾಲನಗರ ತಾಲೂಕು, ಜಿಲ್ಲಾ ವ್ಯಾಪ್ತಿಯಲ್ಲಿ ಒಕ್ಕಲಿಗರ ಭವನ ನಿರ್ಮಾಣಕ್ಕೆ ಅಗತ್ಯ‌ ನೆರವು ಕಲ್ಪಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ‌ ಎಚ್.ಎನ್.ರವೀಂದ್ರ ಮಾತನಾಡಿ, ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಕೊಡುಗೆಯನ್ನು ಸಮುದಾಯ ಬಾಂಧವರು ಹೆಮ್ಮೆಯಿಂದ ಸ್ಮರಿಸುವಂತಾಗಬೇಕಿದೆ. ವಿಶ್ವಮಟ್ಟದಲ್ಲಿ ಖ್ಯಾತಿ ಹೊಂದಿರುವ ಬೆಂಗಳೂರು ನಿರ್ಮಾಣಕ್ಕೆ ಕೆಂಪೇಗೌಡರ ಕೊಡುಗೆ ಅವಿಸ್ಮರಣೀಯ ಎಂದರು.

ಜಿಪಂ‌ ಮಾಜಿ ಸದಸ್ಯ ವಿ.ಪಿ.ಶಶಿಧರ್ ಮಾತನಾಡಿ, ಒಕ್ಕಲಿಗ ಸಮುದಾಯ ಸಂಘಟಿತರಾಗಿ ಎಲ್ಲಡೆ ವಿಸ್ತರಿಸುವ ಮೂಲಕ‌ ನಮ್ಮತನಕ್ಕೆ ಒತ್ತು‌ ನೀಡಬೇಕಿದೆ. ನಿರ್ಲಕ್ಷ್ಯ, ಅಸಡ್ಢೆಯಿಂದ ಹೊರಬಂದು‌ ನಮ್ಮ ಆಚಾರ, ವಿಚಾರಗಳ‌ ಬೆಳವಣಿಗೆಗೆ, ಸಾಧನೆಗೆ ಪ್ರಯತ್ನಿಸಬೇಕಿದೆ ಎಂದರು.

ರಾಜ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ಚೇತನ್ ನಾಡಪ್ರಭು ಕೆಂಪೇಗೌಡರ ಬಗ್ಗೆ ಉಪನ್ಯಾಸ‌ ನೀಡಿದರು.

ಕುಶಾಲನಗರ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಕೆ.ದಿನೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ, ಯುವ ವೇದಿಕೆ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ, ಮಡಿಕೇರಿ ತಾಲೂಕು ಅಧ್ಯಕ್ಷ ವಿ.ಜಿ.ಮೋಹನ್, ಸೋಮವಾರಪೇಟೆ ತಾಲೂಕು ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ವಿರಾಜಪೇಟೆ ಅಧ್ಯಕ್ಷ ಕೆ.ಪಿ.ನಾಗರಾಜ್, ತಾಲೂಕು ಯುವ ಘಟಕ ಅಧ್ಯಕ್ಷ ವಿ.ಬಿ ಜಯರಾಜ್ ಮತ್ತಿತರರು ಇದ್ದರು.

ಶಾಸಕ ಮಂಥರ್ ಗೌಡ, ಜಿಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್, ಸಮಾಜಸೇವಕ ಎಚ್.ಎನ್.ರವೀಂದ್ರ ಸೇರಿದಂತೆ ವಿವಿಧ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ಪದಾಧಿಕಾರಿಗಳಾದ ರಮೇಶ್, ಧನಂಜಯ, ಗಿರೀಶ್, ಶೇಕ್ರೇಗೌಡ, ಗೌತಮ್, ವೆಂಕಟೇಶ್, ಜಗದೀಶ್, ಪ್ರಕಾಶ್, ನಾಗೇಗೌಡ, ಕಿಟ್ಟಿ, ನವೀನ್, ಅರುಣ್ ಚಂಗಪ್ಪ, ಗಾತ್ರಿ, ಸರೋಜಮ್ಮ, ಗೌರಮ್ಮ, ರಶ್ಮಿ, ಬಿ.ಬಿ.ಭಾರತೀಶ್, ಕೆ.ಕೆ.ಮಂಜುನಾಥ್ ಕುಮಾರ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!