ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆಯ ಜೊತೆಗೆ ಕೊಡಗು ವಿವಿ ಒಡಂಬಡಿಕೆ
ಜಂಟಿಯಾಗಿ ಸಂಶೋಧನಾ ಚಟುವಟಿಕೆ ಮತ್ತು ಯೋಜನೆಗೆ ಒತ್ತು
ಕುಶಾಲನಗರ, ಆ 17: ಕೊಡಗು ವಿಶ್ವವಿದ್ಯಾಲಯವು ಭಾರತ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆ (MANAGE) ಜೊತೆಗೆ 09 ಆಗಸ್ಟ್ 2023 ರಂದು ಒಡಂಬಡಿಕೆಗೆ ಸಹಿ ಹಾಕಲಾಯಿತು.
ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆ, ಹೈದರಾಬಾದ್ ಮತ್ತು ಕೊಡಗು ವಿಶ್ವವಿದ್ಯಾಲಯ, ಕೊಡಗು ಇವರುಗಳ ಒಡಬಂಡಿಕೆಯ ಮೂಲಕ ಎರಡೂ ಸಂಸ್ಥೆಗಳ ಮಧ್ಯೆ ಜಂಟಿಯಾಗಿ ಸಂಶೋಧನಾ ಚಟುವಟಿಕೆಗಳನ್ನು ಮತ್ತು ಯೋಜನೆಗಳನ್ನು ಏರ್ಪಡಿಸುವುದು ಹಾಗೂ ಸಮ್ಮೇಳನ ಮತ್ತು ಕಾರ್ಯಗಾರಗಳನ್ನು ಹಮ್ಮಿಕೊಳ್ಳುವುದು. ಈ ಭಾಗಕ್ಕೆ ಸಂಬಂಧಿಸಿದ ವಿಷಯಾಧಾರಿತ ಅಧ್ಯಯನಗಳನ್ನು ಅಭಿವೃದ್ಧಿಪಡಿಸುವುದು. ಈ ಭಾಗದ ಜನತೆಗೆ ಪೂರಕವಾಗುವಂತಹ ಅಧ್ಯಯನಗಳನ್ನು ಕೈಗೊಳ್ಳುವುದು. ವಿಶ್ವವಿದ್ಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧ್ಯಾಪಕರುಗಳು ಮತ್ತು ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧ್ಯಾಪಕರುಗಳು ಪರಸ್ಪರ ವಿನಿಮಯ ಮಾಡಿಕೊಳ್ಳುವುದು. ಕೃಷಿ ಹಾಗೂ ಸಂಬಂಧಿಸಿದ ಯೋಜನೆಗಳ ಬಗೆಗೆ ಜಂಟಿಯಾಗಿ ಅಧ್ಯಯನ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಹಾಗೆಯೇ ಕೊಡಗು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕ ವೃಂದದವರಿಗೆ ಪೂರಕವಾಗಿರುವ ಸಂಬಂಧವನ್ನು ರೂಪಿಸುವಂತಹ ಹಲವಾರು ರೀತಿಯ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುವ ಮುಖ್ಯ ಉದ್ದೇಶವನ್ನು ಈ ಒಡಂಬಡಿಕೆ ಹೊಂದಿದೆ.
ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ತರಬೇತಿ ಕಾರ್ಯಕ್ರಮದ ಸಂದರ್ಭದಲ್ಲಿ ಮಹಾ ನಿರ್ದೇಶಕರಾಗಿರುವ ಡಾ. ಪಿ. ಚಂದ್ರಶೇಖರ್ ಮತ್ತು ಕೊಡಗು ವಿಶ್ವವಿದ್ಯಾಲಯದ ಕುಲತಿಗಳಾದ ಪ್ರೊ. ಅಶೋಕ ಸಂ. ಆಲೂರ ಜಂಟಿಯಾಗಿ 09 ಆಗಸ್ಟ್ 2023 ರಂದು ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು.