ಸಭೆ
ಹಾರಂಗಿ ನೀರಾವರಿ ಸಲಹಾ ಸಮಿತಿ ಸಭೆ: ಕಟ್ಟುಪದ್ದತಿಯಲ್ಲಿ ನೀರು ಹರಿಸಲು ಕ್ರಮ
ಕುಶಾಲನಗರ, ಆ 13: ಹಾರಂಗಿ ನೀರಾವರಿ ಸಲಹಾ ಸಮಿತಿ ಸಭೆ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಮೈಸೂರಿನ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಕಛೇರಿಯಲ್ಲಿ ನಡೆಯಿತು.
ಮುಂಗಾರು ವೈಫಲ್ಯದ ಹಿನ್ನಲೆಯಲ್ಲಿ ನೀರಿನ ಅಭಾವ ಉಂಟಾಗಿರುವ ಕಾರಣ ರೈತರು, ಜನಜಾನುವಾರುಗಳಿಗೆ ನೀರು ಹರಿಸುವ ಸಂಬಂಧ ಚರ್ಚೆ ನಡೆಯಿತು.
ಹಾರಂಗಿ ಅಣೆಕಟ್ಟೆಯಿಂದ ಮುಂದಿನ 15 ದಿನಗಳವರೆಗೆ ಪ್ರತಿ ದಿನ 1500 ಕ್ಯೂಸೆಕ್ ನೀರು ನದಿ ಮತ್ತು ಕಾಲುವೆ ಮೂಲಕ ಹರಿಸಲು ಕ್ರಮ ಕೈಗೊಳ್ಳುವಂತೆ ಸಭೆ ತೀರ್ಮಾನಿಸಿತು. 15 ದಿನಗಳ ಅಂತರದಲ್ಲಿ ನೀರು ಸ್ಥಗಿತಗೊಳಿಸಿ, ಮುಂದಿನ 15 ದಿನಗಳ ಕಾಲ ಕಟ್ಟುಪದ್ದತಿಯಲ್ಲಿ ನೀರು ಹರಿಬಿಡಲು ಇಂದಿನಿಂದಲೇ ಕ್ರಮಕೈಗೊಳ್ಳುವಂತೆ ನಿಗಮದ ಅಧಿಕಾರಿಗಳಿಗೆ ಸೂಚಿಸಲಾಯಿತು.
ಸಭೆಯಲ್ಲಿ ಕೊಡಗು ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಬೋಸರಾಜು,ಎಚ್.ಸಿ.ಮಹದೇವಪ್ಪ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಶಾಸಕರುಗಳಾದ ಎ.ಮಂಜು, ರವಿಶಂಕರ್, ಎಂಎಲ್ಸಿ ಮರಿತಿಬ್ಬೇಗೌಡ, ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜ, ಎಸ್ಪಿ ರಾಮರಾಜನ್, ಸಿಇಒ ವರ್ಣಿತ್‌ನೇಗಿ, ಸಿಎನ್ ಎನ್ ಮುಖ್ಯ ಇಂಜಿನಿಯರ್ ಆರ್.ಎಲ್.ವೆಂಕಟೇಶ್, ಸೂಪರಿಂಟೆಂಡೆಂಟ್ ಇಂಜಿನಿಯರ್ ಕೆ. .ಕೆ.ರಘುಪತಿ, ಕಾರ್ಯ ಪಾಲಕ ಅಭಿಯಂತರ ಐ.ಕೆ.ಪುಟ್ಟಸ್ವಾಮಿ ಸೇರಿದಂತೆ ಹಾಸನ,ಮೈಸೂರು, ಕೊಡಗು ಜಿಲ್ಲೆಯ ನೀರಾವರಿ ನಿಗಮ, ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.