ಕುಶಾಲನಗರ, ಜು28 : ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಜೀವನ ರೂಪಿಸಲು ” ವಚನ ಸಾಹಿತ್ಯ” ಉತ್ತಮ ವೇದಿಕೆಯಾಗಿದ್ದು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚು ಉಪಕಾರಿ ಎಂದು ಕೊಡಗು ವಿಶ್ವ ವಿದ್ಯಾನಿಲಯದ ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮದ್ ಹೇಳಿದರು.
ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಕುಶಾಲನಗರದ ಮೂಕಾಂಬಿಕ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ” ಶಾಲಾ ಕಾಲೇಜುಗಳೆಡೆಗೆ ವಚನ ಸಾಹಿತ್ಯದ ನಡಿಗೆ ” ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದಲ್ಲಿ ಲಿಂಗ, ವರ್ಣ ಹಾಗೂ ವರ್ಗ ತಾರತಮ್ಯ ಇಲ್ಲದೇ ಎಲ್ಲರನ್ನೂ ಸರಿ ಸಮಾನವಾಗಿ ಕಾಣುವಂತಹ ವ್ಯವಸ್ಥೆಯನ್ನು ಅನುಭವ ಮಂಟಪದ ಮೂಲಕ ಸಮಾಜಕ್ಕೆ ಸಾರಿದವರು ಬಸವಾದಿ ಶರಣರು.
ಇಂತಹ ಮಹಾ ಪುರುಷರಿಂದ ರೂಪುಗೊಂಡ ವಚನ ಸಾಹಿತ್ಯದ ಅರಿವು ಇಂದು ಅಗತ್ಯ ಎಂದು ಜಮೀರ್ ಹೇಳಿದರು.
ಇಂದಿನ ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ
ವಿವೇಕಾನಂದರ ವಿವೇಕವಾಣಿ, ಬಸವಾದಿ ಶರಣರ ವಚನವಾಣಿ ಗಳನ್ನು ಅರಿತು ಅದರಂತೆ ನಡೆದಲ್ಲಿ ಸಮಾಜದಲ್ಲಿ ತಲೆ ಎತ್ತಿ ನಡೆಯುವಂತೆ ಮಾಡುತ್ತವೆ. ಹಾಗೆಯೇ ಬಸವಣ್ಣ ನವರು ಹನ್ನೆರಡನೇ ಶತಮಾನದಲ್ಲಿ ರಚಿಸಿ ರೂಪಿಸಿದ ಕಲಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂಬ ಸಪ್ತ ಸೂತ್ರ ಪಾರಮಾರ್ಥಿಕ ಜೀವನದತ್ತ ಕರೆದೊಯ್ಯುತ್ತದೆ ಎಂದು ಡಾ.ಜಮೀರ್ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಹೆಚ್.ಎಸ್.ಚೇತನ್ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಸಮಾಜದಲ್ಲಿ ಕಂದಾಚಾರಗಳು ಹಾಗೂ ಅನಗತ್ಯ ಕಟ್ಟುಪಾಡುಗಳೊಂದಿಗೆ ಜನರನ್ನು ಸಂಕಷ್ಟಕ್ಕೆ ದೂಡಿದ್ದ ಬ್ರಾಹ್ಮಣ್ಯ ಹಾಗೂ ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ್ದ ಬಸವಾದಿ ಶರಣರ ಚಿಂತನೆಗಳು ಇಂದಿಗೂ ಮತ್ತು ಎಂದಿಗೂ ಸಾರ್ವಕಾಲಿಕ ಸತ್ಯವಾಗಿವೆ. ಮೊಬೈಲ್ ಗಳ ಬಳಕೆ ವಿದ್ಯಾರ್ಥಿಗಳಿಗೆ ಮಾರಕವಾಗಿರುವುದರಿಂದ ವಚನ ಸಾಹಿತ್ಯದ ಅಭ್ಯಾಸ ಹಾಗೂ ಮನನ ಇಂದು ತೀರಾ ಅನಿವಾರ್ಯ ಎಂದು ಚೇತನ್ ಅಭಿಪ್ರಾಯ ಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಚನ ಸಾಹಿತ್ಯ ವೇದಿಕೆ ಕೊಡಗು ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ, ಬಸವಾದಿ ಶರಣರು ಅನುಭವ ಮಂಟಪದ ಮೂಲಕ ಬರೆದು ಸಾರಿದ ಜೀವನದ ನೀತಿ ಸೂತ್ರಗಳಾದ ವಚನ ಸಾಹಿತ್ಯದ ಬಗ್ಗೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಶಾಲಾ ಕಾಲೇಜು ಗಳೆಡೆಗೆ ವಚನ ಸಾಹಿತ್ಯದ ನಡಿಗೆ ಎಂಬ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ರೂಪಿಸಲಾಗುವುದು ಎಂದರು.
ಮೂಕಾಂಬಿಕ ಪಿಯು ಕಾಲೇಜು ಪ್ರಾಂಶುಪಾಲೆ ಯಶೋಧರ, ಪ್ರೌಢಶಾಲಾ ಮುಖ್ಯ ಶಿಕ್ಷಕ ಉಪನ್ಯಾಸಕರಾದ ಪ್ರಸನ್ನ, ಹೇಮಂತ್, ಶ್ರೇಣಿ, ಅನಿತಾ, ಸುರೇಶ್, ಎಸ್.ಎಸ್.ಗೋಪಾಲ್, ಶಿಕ್ಷಕರಾದ ಕಾಂತರಾಜು, ಚಂದ್ರಶೇಖರ ಮೊದಲಾದವರಿದ್ದರು.
ವಿದ್ಯಾರ್ಥಿನಿ ಅಕ್ಷಿತಾ ನಿರೂಪಿಸಿದರು. ಶಾಲಿನಿ ತಂಡ ಪ್ರಾರ್ಥಿಸಿ, ಮೆಹರಾಜ್ ಪಾಶಾ ಸ್ವಾಗತಿಸಿದರು. ರಫೀನಾ ವಂದಿಸಿದರು.
Back to top button
error: Content is protected !!