ಕಾರ್ಯಕ್ರಮ

ಕೊಡಗು ವಿಶ್ವವಿದ್ಯಾಲಯಕ್ಕೆ ಶಾಸಕ ಡಾ. ಮಂಥರ್‌ಗೌಡ ಭೇಟಿ

ಕುಶಾಲನಗರ, ಜು 23: ಕೊಡಗು ವಿಶ್ವವಿದ್ಯಾಲಯಕ್ಕೆ ಬೇಕಾಗಿರುವ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಡಾ. ಮಂಥರ್‌ಗೌಡ ಅವರು ಭರವಸೆ ನೀಡಿದರು.

ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಆವರಣಕ್ಕೆ ಭೇಟಿ ನೀಡಿದ ಅವರು, ನೂತನವಾಗಿ ಆರಂಭವಾಗಿರುವ ವಿಶ್ವವಿದ್ಯಾಲಯದ ಸರ್ವತ್ತೋಮುಖ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ‌ ತಿಳಿಸುತ್ತಾ, ಜಿಲ್ಲೆಗೆ ಹೆಮ್ಮೆ ತರುವಂತಹ ರೀತಿಯಲ್ಲಿ ಈ ವಿಶ್ವವಿದ್ಯಾಲಯವು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಉದ್ಯೋಗ ಮೇಳ ಆಯೋಜನೆ ಮಾಡುವ ಮೂಲಕ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡಲಾಗುವುದು. ವಿವಿಯ ಎಲ್ಲಾ ಕುಂದು ಕೊರತೆಗಳನ್ನು ಬಗೆಹರಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ವಿದ್ಯಾರ್ಥಿ ನಿಲಯ, ಸಾರಿಗೆ ಸೌಲಭ್ಯ, ವಿದ್ಯುತ್ ಸಮರ್ಪಕ ಪೂರೈಕೆ, ಹೆಚ್ಚುವರಿ ಕಟ್ಟಡ ಹೀಗೆ ಅಗತ್ಯವಾಗಿ ಬೇಕಾಗಿರುವಂತಹ ಸೌಲಭ್ಯದ ಬಗ್ಗೆ ಹೆಚ್ಚು ಕೇಂದ್ರೀಕರಿಸಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೊಡಗು ವಿಶ್ವವಿದ್ಯಾಲಯಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ. ಮಂಥರ್‌ಗೌಡ ಅವರಿಗೆ ಕೊಡಗು ವಿವಿಯ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಡಗು ವಿವಿಯ ಕುಲಸಚಿವರಾದ (ಮೌಲ್ಯಮಾಪನ) ಡಾ. ಸೀನಪ್ಪ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಕೊಡಗು ವಿಶ್ವವಿದ್ಯಾಲಯವನ್ನು ಒಂದು ಮಾದರಿ ವಿಶ್ವವಿದ್ಯಾಲಯವನ್ನಾಗಿ ರೂಪಿಸಲು ಸಹಕಾರ ನೀಡುವಂತೆ, ಮೂಲಭೂತ ಸೌಲಭ್ಯಗಳ ಬೇಡಿಕೆಯನ್ನು ಪೂರೈಸುವಂತೆ ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಕೇಂದ್ರದ ಪ್ರಭಾರ ನಿರ್ದೇಶಕರಾದ ಪ್ರೊ. ಕೆ.‌ ಕೆ. ಧರ್ಮಪ್ಪ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ರಾಜಕುಮಾರ್ ಎಸ್ ಮೇಟಿ, ಕುಶಾಲನಗರ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಪಿ. ಶಶಿಧರ್, ಬೋಧಕ ವೃಂದ, ಬೋಧಕೇತರ ವೃಂದ, ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!