ಕುಶಾಲನಗರ, ಜು 06: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕುಶಾಲನಗರ ತಾಲೂಕಿನಲ್ಲಿ ಕಛೇರಿಗೊಬ್ಬ ಮರಿ ಶಾಸಕರು ಹುಟ್ಟುಕೊಂಡಿದ್ದು, ಅಧಿಕಾರಿಗಳು, ನೌಕರರು ಒತ್ತಡ ಮತ್ತು ಆತಂಕದ ನಡುವೆ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಬಿಜೆಪಿಯ ಸೋಮವಾರಪೇಟೆ ಮಂಡಲ ವಕ್ತಾರ ಕೆ.ಜಿ.ಮನು ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು,
ಕುಶಾಲನಗರದಲ್ಲಿ ಕೆಲವು ಆಡಳಿತ ಪಕ್ಷದ ಮುಖಂಡರುಗಳು ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ವರ್ಗಾವಣೆಯ ಧಮ್ಕಿ ಹಾಕುತ್ತಿದ್ದು, ಉಳಿವಿನ ಭಾಗ್ಯಕ್ಕೆ ಕಪ್ಪ ವಸೂಲಿ ಮಾಡುತ್ತಿದ್ದಾರೆ. ಗುತ್ತಿಗೆದಾರರ ಬಳಿ ಹಳೆಯ ಬಿಲ್ಲಿಗೆ 50% ಕಮಿಷನ್, ಹೊಸ ಬಿಲ್ಲಿಗೆ 45% ಕಮಿಷನ್, ಗುತ್ತಿಗೆದಾರರಿಗೆ ಕಾಮಗಾರಿ ಭಾಗ್ಯ ಕಲ್ಪಿಸಲು ಮುಂಗಡ 20% ಕಮಿಷನ್ ದಂಧೆ ಶುರುವಾಗಿದ್ದು ಸರ್ಕಾರದ ಆರಂಭದ ದಿನಗಳಲ್ಲೆ ಭ್ರಷ್ಟಾಚಾರಕ್ಕೆ ಹಲವು ಪ್ಯಾಕೇಜ್ ಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಕಸಗುಡಿಸುವವನಿಂದ ಹಿಡಿದು ಅಧಿಕಾರಿಯ ವರೆಗೂ ವರ್ಗಾವಣೆಯ ದಂಧೆ ಆರಂಭಿಸಿದ್ದು ಸರ್ಕಾರಿ ಕಛೇರಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕುಶಾಲನಗರದಲ್ಲಿ ಪೊಲೀಸ್ ಇಲಾಖೆ ಗೆ ಒತ್ತಾಯ ಪೂರ್ವಕವಾಗಿ ಹೆಲ್ಮೆಟ್ ರಹಿತ ವಾಹನ ಚಾಲನೆ ಭಾಗ್ಯ ಹಾಗೂ ದ್ವಿಚಕ್ರ ವಾಹನದಲ್ಲಿ ತ್ರಿಸವಾರಿ ಭಾಗ್ಯಕ್ಕೆ ಅವಕಾಶ ಕಲ್ಪಿಸುವ ಸ್ಥಿತಿ ನಿರ್ಮಾಣವಾಗಿರುವುದು ನಗರದಾದ್ಯಂತ ಕಂಡುಬರುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಕೆ.ಜಿ.ಮನು, ಸ್ವಯಂ ಘೋಷಿತ ಮರಿ ಶಾಸಕರುಗಳಿಗೆ ಕಡಿವಾಣ ಹಾಕದೆ ಕುಮ್ಮಕ್ಕು ನೀಡಿದ್ದೇ ಆದಲ್ಲಿ ನಗರದಲ್ಲಿ ಭ್ರಷ್ಟಾಚಾರ ತಾಂಡವಾಡಲಿದ್ದು ಇದು ಹೀಗೆ ಮುಂದುವರಿದಲ್ಲಿ ಭಾರತೀಯ ಜನತಾ ಪಾರ್ಟಿ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.
Back to top button
error: Content is protected !!