ಕಾರ್ಯಕ್ರಮ
ಸಿಎಂ ಸಿದ್ದರಾಮಯ್ಯ ಭೇಟಿಯಾದ ನೂತನ ವಿಶ್ವವಿದ್ಯಾಲಯಗಳ ಕುಲಪತಿಗಳ ನಿಯೋಗ
ಕುಶಾಲನಗರ, ಜೂ 02: ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂ. ಆಲೂರ ಅವರು, ನೂತನ ವಿಶ್ವವಿದ್ಯಾಲಯಗಳ ಕುಲಪತಿಗಳ ನಿಯೋಗದ ಜೊತೆಗೂಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣದಲ್ಲಿ ಭೇಟಿ ಮಾಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಕುಲಪತಿಗಳ ನಿಯೋಗವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಅವರು, ದೇಶದ ಭವಿಷ್ಯವನ್ನು ಹೆಚ್ಚು ವೈಜ್ಞಾನಿಕವಾಗಿ ರೂಪಿಸುವ ಶಕ್ತಿ ವಿಶ್ವವಿದ್ಯಾಲಯಗಳಿಗಿದೆ. ದೇಶದ ಮತ್ತು ವಿದ್ಯಾರ್ಥಿಗಳ ಹಿತಕ್ಕಾಗಿ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಂಡು, ವೈಜ್ಞಾನಿಕ ತಳಹದಿಯ ಮೇಲೆ ಉನ್ನತ ಶಿಕ್ಷಣವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳಿಗೆ ಸಂಪೂರ್ಣ ಸಹಕಾರ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಎಲ್ಲಾ ಹೊಸ ವಿಶ್ವವಿದ್ಯಾಲಯಗಳ ಕುಲಪತಿಗಳ ಪರವಾಗಿ ಪ್ರೊ. ಅಶೋಕ ಸಂ. ಆಲೂರ ಅವರು ಮುಖ್ಯಮಂತ್ರಿಗಳ ಬಳಿ ವಿನಂತಿಸುತ್ತಾ, ಈ ವರ್ಷದ ಆಯವ್ಯಯದಲ್ಲಿ ಹೊಸ ವಿಶ್ವವಿದ್ಯಾಲಯಗಳಿಗೆ ಕನಿಷ್ಟ ಒಂದು ಮಹಿಳಾ ವಿದ್ಯಾರ್ಥಿ ನಿಲಯ ಮತ್ತು ಪುರುಷ ವಿದ್ಯಾರ್ಥಿ ನಿಲಯ, ಶೈಕ್ಷಣಿಕ ಕಟ್ಟಡ ಹಾಗೂ ಪ್ರಯೋಗಾಲಯಗಳ ಸುಧಾರಣೆಗೆ ಅನುದಾನವನ್ನು ಒದಗಿಸುವಂತೆ ಕೋರಿದರು. ಮಾನ್ಯ ಮುಖ್ಯಮಂತ್ರಿಗಳು ಇದಕ್ಕೆ ಪೂರಕವಾಗಿ ಸ್ಪಂದಿಸಿದರು.
ಹೊಸ ವಿಶ್ವವಿದ್ಯಾಲಯಗಳ ಕುಲಪತಿಗಳ ನಿಯೋಗದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ, ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದೇಶಪಾಂಡೆ, ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಂಗಮಶೆಟ್ಟಿ, ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿರಾದಾರ್, ಹಾಸನ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತಾರಾನಾಥ್, ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಗಂಗಾಧರ್ ಉಪಸ್ಥಿತರಿದ್ದರು.