ಮಡಿಕೇರಿ,ಮೇ 14: ಕ್ಷೇತ್ರದ ಸಮಸ್ಯೆ, ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಸಮಸ್ಯೆಗಳನ್ನು ನೇರವಾಗಿ ನನ್ನ ಗಮನಕ್ಕೆ ತನ್ನಿ.
ನನ್ನ ಗೆಲುವಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜತೆಗೆ ಎಲ್ಲಾ ವರ್ಗ, ಸಮುದಾಯದ ಸಹಕಾರವಿದೆ.
ಎಲ್ಲರನ್ನು ಸಮಾನವಾಗಿ ಕೊಂಡೊಯ್ಯುವುದು ನನ್ನ ಆದ್ಯತೆ.
ಯಾರಲ್ಲೂ ಭೇದ-ಭಾವ ಮಾಡುವುದಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ. ಬಡವರಿಗೆ ನೆರವಾಗಬೇಕೆಂಬ ಕನಸು ಇದೆ. ಅದನ್ನು ನನ್ನ ಅವಧಿಯಲ್ಲಿ ಈಡೇರಿಸಲು ಶ್ರಮಿಸುತ್ತೇನೆ ಎಂದರು.
ಸಣ್ಣ ವಯಸ್ಸಿನಲ್ಲೇ ಪಕ್ಷ ಅವಕಾಶ ನೀಡಿದೆ. ಸಿಕ್ಕ ಅವಕಾಶವನ್ನು ಜನಸೇವೆಗಾಗಿ ಬಳಸಿಕೊಳ್ಳುತ್ತೇನೆ. ವೃತ್ತಿಯಲ್ಲಿ ವೈದ್ಯನಾಗಿರುವುದರಿಂದ ವೈದ್ಯಕೀಯ ಸೇವೆ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಉತ್ತಮ ಆಸ್ಪತ್ರೆ, ನಗರ ಪ್ರದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡುತ್ತೇನೆ. ಕ್ಷೇತ್ರದಲ್ಲಿ ಅನೇಕ ಕಾಮಗಾರಿಗಳು ಅಪೂರ್ಣವಾಗಿದೆ. ಅವುಗಳನ್ನು ಪೂರ್ಣಗೊಳಿಸಬೇಕು. ಕ್ರೀಡೆಗೆ ಸಂಬಂಧಿಸಿದಂತೆಯೂ ಯುವ ಸಮೂಹಕ್ಕೆ ಒತ್ತು ನೀಡಲು ಕಾರ್ಯ ಮಾಡುತ್ತೇನೆ. ಕಾರ್ಮಿಕರಿಗೆ ಗೃಹ ಯೋಜನೆ ಜಾರಿಗೊಳಿಸಲು ಶ್ರಮಿಸುವುದಾಗಿ ಪ್ರತಿಕ್ರಿಯಿಸಿದರು.
ಚುನಾವಣೆ ಸಂದರ್ಭ ಹಲವು ರೀತಿಯ ಟೀಕೆಗಳನ್ನು ಮಾಡಿದರು. ನಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಸಕಾರಾತ್ಮಕ ರಾಜಕಾರಣ ಮಾಡಿದೆವು. ನಮ್ಮ ವಿರುದ್ಧ ನಡೆದ ಅಪಪ್ರಚಾರಗಳಿಗೆಲ್ಲ ಮತದಾರ ಚುನಾವಣೆಯಲ್ಲಿ ಉತ್ತರ ನೀಡಿದ್ದಾನೆ ಎಂದರು. ಚುನಾವಣೆ ಸಂದರ್ಭ ಕಾಂಗ್ರೆಸ್ ತೊರೆದು ಬೇರೆ ಪಕ್ಷ ಸೇರಿದವರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದು ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ನೀಡಿರುವ ಭರವಸೆಗಳನ್ನು ಖಂಡಿತವಾಗಿ ಈಡೇರಿಸುವಲ್ಲಿ ರಾಜ್ಯ ಸರಕಾರ ಸಫಲವಾಗಲಿದೆ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮಾತನಾಡಿ, ಮಡಿಕೇರಿ ನಗರದಲ್ಲಿ 1300ಕ್ಕೂ ಹೆಚ್ಚು ಮತಗಳ ಮುನ್ನಡೆ ಪಕ್ಷಕ್ಕೆ ಸಿಕ್ಕಿದೆ. ನಗರದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯವನ್ನು ನೂತನ ಶಾಸಕರು ಮಾಡಲಿದ್ದಾರೆ. ನಗರದ ಅಭಿವೃದ್ಧಿ ಸಂಬಂಧಿಸಿದಂತೆ ಒಳ್ಳೆಯ ಕೆಲಸ ಕಾರ್ಯಗಳು ಮುಂದಿನ ದಿನದಲ್ಲಿ ಆಗಲಿದೆ ಎಂದರು.
ಪಕ್ಷದ ಪ್ರಮುಖರಾದ ಎಚ್.ಎಸ್. ಚಂದ್ರಮೌಳಿ, ಟಿ.ಪಿ. ರಮೇಶ್, ಕೆ.ಪಿ. ಚಂದ್ರಕಲಾ, ಎಸ್.ಐ. ಮುನೀರ್ ಅಹಮ್ಮದ್ ಗೋಷ್ಠಿಯಲ್ಲಿದ್ದರು.
Back to top button
error: Content is protected !!